ಬರ್ಮಿಂಗ್‌ಹ್ಯಾಂ (ಪಿಟಿಐ/ರಾಯಿಟರ್ಸ್): ವಿಶ್ವಕಪ್ ಇತಿಹಾಸದಲ್ಲಿ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರದ ಎರಡು ತಂಡಗಳು ಈ ಸಲ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಭಾನುವಾರ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಬಳಗವನ್ನು ಎದುರಿಸಲಿದೆ. ಗುರುವಾರ ಎಜ್‌ಬಾಸ್ಟನ್ ಅಂಗಳದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ನಿರೀಕ್ಷೆಗಿಂತ ಸುಲಭವಾಗಿ ಸೋಲಿಸಿದ ಆತಿಥೇಯ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿತು.
ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್ ತಂಡಕ್ಕೆ ಇದುವರೆಗೂ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಐದನೇ ಬಾರಿ ಆತಿಥ್ಯ ವಹಿಸಿರುವ ತಂಡವು ಈಗ ಪ್ರಶಸ್ತಿಯ ಹೊಸ್ತಿಲಲ್ಲಿ ನಿಂತಿದೆ. ತಂಡವು ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ಮೂರು ಬಾರಿ ರನ್ನರ್ಸ್ ಅಪ್ ಆಗಿತ್ತು.
ಮ್ಯಾಂಚೆಸ್ಟರ್‌ನಲ್ಲಿ ಬುಧವಾರ ನಡೆದಿದ್ದ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಜಯಿಸಿದ್ದ ನ್ಯೂಜಿಲೆಂಡ್ ಈಗಾಗಲೇ ಫೈನಲ್ ತಲುಪಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡಕ್ಕೆ ವೇಗಿಗಳಾದ ಕ್ರಿಸ್ ವೋಕ್ಸ್ (20ಕ್ಕೆ3) ಮತ್ತು ಜೋಫ್ರಾ ಆರ್ಚರ್ (32ಕ್ಕೆ2) ಆರಂಭದಲ್ಲಿಯೇ ಬಲವಾದ ಪೆಟ್ಟು ಕೊಟ್ಟರು. ಆದರೆ ಸ್ಟೀವ್ ಸ್ಮಿತ್ (85; 119 ಎಸೆತ, 6ಬೌಂಡರಿ) ಅವರ ದಿಟ್ಟ ಆಟದ ಬಲದಿಂದ 49 ಓವರ್‌ಗಳಲ್ಲಿ 223 ರನ್ ಗಳಿಸಲು ಸಾಧ್ಯವಾಯಿತು.
ಗುರಿ ಬೆನ್ನಟ್ಟಿದ ಆತಿಥೇಯ ತಂಡವು 32.1 ಓವರ್‌ಗಳಲ್ಲಿ 2 ವಿಕೆಟ್‌ಗೆ 226 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ (85; 65ಎಸೆತ, 9ಬೌಂಡರಿ, 5 ಸಿಕ್ಸರ್) ಮತ್ತು ಜಾನಿ ಬೇಸ್ಟೊ (34; 43 ಎಸೆತ, 5ಬೌಂಡರಿ) ಅವರು ಗಟ್ಟಿ ಬುನಾದಿ ಹಾಕಿ ತಂಡದ ಜಯವನ್ನು ಸುಗಮಗೊಳಿಸಿದರು. ಮೊದಲ ವಿಕೆಟ್‌ಗೆ ಅವರು 124 ರನ್‌ಗಳನ್ನು ಪೇರಿಸಿದರು.
18ನೇ ಓವರ್‌ನಲ್ಲಿ ಮಿಷೆಲ್ ಸ್ಟಾರ್ಕ್ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಜಾನಿ ಬೇಸ್ಟೊ ಬಿದ್ದರು. ಈ ಟೂರ್ನಿಯಲ್ಲಿ 27ನೇ ವಿಕೆಟ್ ಪಡೆದ ಸಂಭ್ರಮ ಸ್ಟಾರ್ಕ್ ಅವರದ್ದಾಯಿತು.
ಜೇಸನ್ ರಾಯ್ 20ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಔಟಾದರು. ಆದರೆ, ಚೆಂಡು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರ ಕೈಗವಸು ಸೇರುವ ಮುನ್ನ ಬ್ಯಾಟ್‌ಗೆ ಸ್ಪರ್ಶಿಸಿರಲಿಲ್ಲ. ಟಿವಿ ರಿಪ್ಲೆಯಲ್ಲಿ ಅದು ಸ್ಪಷ್ಟವಾಗಿತ್ತು. ಅಂಪೈರ್ ಕುಮಾರ ಧರ್ಮಸೇನಾ ಕೊಟ್ಟ ತಪ್ಪು ತೀರ್ಪಿನಿಂದಾಗಿ ಜೇಸನ್ ನಿರಾಸೆಯಿಂದಲೇ ಪೆವಿಲಿಯನ್ ಸೇರಿದರು. ಆದರೆ ಇದರಿಂದ ತಂಡಕ್ಕೆ ಕೊಂಚವೂ ತೊಂದರೆಯಾಗಲಿಲ್ಲ. ಜೋ ರೂಟ್ (ಔಟಾಗದೆ 49) ಮತ್ತು ನಾಯಕ ಇಯಾನ್ ಮಾರ್ಗನ್ (ಔಟಾಗದೆ 45) ತಂಡವನ್ನು ಜಯದ ಗೆರೆ ದಾಟಿಸಿದರು.
ಸ್ಮಿತ್ ದಿಟ್ಟ ಹೋರಾಟ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಹೆಡೆಮುರಿ ಕಟ್ಟುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಸಫಲರಾದರು. ವೇಗಿ ಜೋಫ್ರಾ ಆರ್ಚರ್ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಆ್ಯರನ್ ಫಿಂಚ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.
ನಂತರದ ಓವರ್‌ನಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದ ಕ್ರಿಸ್ ವೋಕ್ಸ್ ತಮ್ಮ ಬೇಟೆ ಆರಂಭಿಸಿದರು. ತಮ್ಮ ನಂತರದ ಇನ್ನೊಂದು ಓವರ್‌ನಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್ ಅವರ ವಿಕೆಟ್ ಕಿತ್ತರು. ಉಸ್ಮಾನ್ ಖ್ವಾಜಾ ಗಾಯಗೊಂಡಿದ್ದರಿಂದ ಪೀಟರ್ ಸ್ಥಾನ ಪಡೆದಿದ್ದರು.
ಆದರೆ ಈ ಹಂತದಲ್ಲಿ ದಿಟ್ಟತನದಿಂದ ಆಡಿದ ಸ್ಮಿತ್ (85; 119ಎಸೆತ, 6ಬೌಂಡರಿ) ಮತ್ತು ಅಲೆಕ್ಸ್ ಕ್ಯಾರಿ (46; 70ಎ, 4ಬೌಂಡರಿ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 103 ರನ್ ಗಳಿಸಿದರು. ಇದರಿಂದಾಗಿ ತಂಡವು ಚೇತರಿಸಿಕಂಡಿತು.
ದವಡೆಗೆ ಗಾಯ: ಜೋಫ್ರಾ ಎಸೆತವೊಂದು ಹೆಲ್ಮೆಟ್‌ಗೆ ಅಪ್ಪಳಿಸಿದ್ದರಿಂದ ಅಲೆಕ್ಸ್ ಕ್ಯಾರಿ ಗಾಯಗೊಂಡರು. ರಕ್ತ ಸುರಿದರೂ ಅವರು ಕ್ರೀಸ್‌ನಿಂದ ನಿರ್ಗಮಿಸಲಿಲ್ಲ. ಫಿಸಿಯೊ ಬಂದು ದವಡೆಗೆ ಬ್ಯಾಂಡೇಜ್ ಹಾಕಿದ ನಂತರ ಆಟ ಮುಂದುವರಿಸಿದರು. ನಾಲ್ಕು ರನ್ ಗಳಿಸಿದ್ದ ಅಲೆಕ್ಸ್ ಅವರು ಸ್ಮಿತ್‌ಗೆ ಉತ್ತಮ ಜೊತೆ ನೀಡಿದರು. ಆದರೆ, ನಾಲ್ಕು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಈ ಜೊತೆಯಾಟವನ್ನು ಸ್ಪಿನ್ನರ್ ಆದಿಲ್ ರಶೀದ್ ಮುರಿದರು. ರಶೀದ್ ಅದೇ ಓವರ್‌ನಲ್ಲಿ ಮಾರ್ಕಸ್ ಸ್ಟೊಯಿನಿಸ್ ವಿಕೆಟ್ ಕೂಡ ಗಳಿಸಿದರು.
ಶತಕದತ್ತ ಹೆಜ್ಜೆಯಿಟ್ಟಿದ್ದ ಸ್ಟೀವ್ ಸ್ಮಿತ್ ಅವರನ್ನು ಜೋಸ್ ಬಟ್ಲರ್ ರನ್‌ಔಟ್ ಮಾಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ (22) ಮತ್ತು ಮಿಷೆಲ್ ಸ್ಟಾರ್ಕ್ (29) ಅಲ್ಪ ಕಾಣಿಕೆ ನೀಡಿದರು.
ಪ್ರತಿಭಟನಾ ಬ್ಯಾನರ್ ಇಳಿಬಿಟ್ಟು ಹಾರಿದ ವಿಮಾನ
ಬರ್ಮಿಂಗ್‌ಹ್ಯಾಂ (ಪಿಟಿಐ): ಬಲೂಚಿಸ್ತಾನ ಹೋರಾಟಗಾರರಿಗೆ ಬೆಂಬಲ ಸೂಚಿಸುವ ಬ್ಯಾನರ್ ಇಳಿಬಿಟ್ಟ ಪುಟ್ಟ ವಿಮಾನವೊಂದು ಗುರುವಾರ ಇಂಗ್ಲೆಂಡ್– ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಎಜ್‌ಬಾಸ್ಟನ್ ಕ್ರೀಡಾಂಗಣದ ಮೇಲೆ ಹಾರಿಹೋಗಿದೆ. ಇದು ಆತಿಥೇಯ ದೇಶಕ್ಕೆ ಮುಜುಗರ ಉಂಟುಮಾಡಿದೆ.
ಬ್ಯಾನರ್ ಹೊಂದಿದ್ದ ಈ ಪುಟ್ಟ ವಿಮಾನ ಐದು ಬಾರಿ ಕ್ರೀಡಾಂಗಣದ ಪ್ರದಕ್ಷಿಣೆ ಹಾಕಿದೆ. ‘ಬಲೂಚಿಸ್ತಾನ ಪರ ವಿಶ್ವ ಧ್ವನಿ ಎತ್ತಬೇಕಾಗಿದೆ’ ಎಂಬ ಬರಹ ಬ್ಯಾನರ್‌ನಲ್ಲಿತ್ತು. ಬಲೂಚಿಸ್ತಾನ, ಪಾಕಿಸ್ತಾನದ ಒಂದು ಪ್ರಾಂತ್ಯ.
ಈ ವಿಶ್ವಕಪ್‌ನಲ್ಲಿ ಇಂಥ ಪ್ರಕರಣ ಇದೇ ಮೊದಲನೆಯದಲ್ಲ. ಭಾರತ– ಶ್ರೀಲಂಕಾ ಪಂದ್ಯದ ವೇಳೆ ‘ಜಸ್ಟಿಸ್ ಫಾರ್ ಕಾಶ್ಮೀರ್’, ‘ನರಮೇಧ ನಿಲ್ಲಿಸಿ, ಕಾಶ್ಮೀರ ವಿಮೋಚನೆಯಾಗಲಿ’ ಎಂಬ ಬರಹದ ಬ್ಯಾನರ್ ಇರುವ ವಿಮಾನ ಹಾರಿತ್ತು. ಇನ್ನೊಂದು ಸಂದರ್ಭದಲ್ಲಿ ‘ಭಾರತದಲ್ಲಿ ಗುಂಪು ಥಳಿತ ನಿಲ್ಲಿಸಿ’ ಎಂಬ ಬರಹದ ಬ್ಯಾನರ್ ಹೊಂದಿದ್ದ ಪುಟ್ಟ ವಿಮಾನ ಕ್ರೀಡಾಂಗಣದ ಮೇಲೆ ಹಾದು ಹೋಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.