ADVERTISEMENT

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಹರಿದ ಶತಕಗಳು

ಮಂಜುನಾಥ ಹುಲಕೊಪ್ಪದ
Published 21 ಜುಲೈ 2019, 19:30 IST
Last Updated 21 ಜುಲೈ 2019, 19:30 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ   

ಐದನೇ ಬಾರಿ ವಿಶ್ವಕಪ್‌ ಆತಿಥ್ಯ ವಹಿಸಿದ ಇಂಗ್ಲೆಂಡ್‌ ಮೊದಲ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಆ ಸಂಭ್ರಮವನ್ನು ಸ್ಮರಣೀಯವಾಗಿಸಿತು. ಈ ಹಿಂದೆ ನಾಲ್ಕು ಬಾರಿ ವಿಶ್ವಕಪ್‌ ಆತಿಥ್ಯ ವಹಿಸಿದ್ದ ಇಂಗ್ಲೆಂಡ್‌ ಒಮ್ಮೆ ಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿತ್ತು.

ಸಾಮಾನ್ಯವಾಗಿ ಇಂಗ್ಲೆಂಡ್‌ನ ವಾತಾವರಣದಲ್ಲಿ ಮಧ್ಯಮ, ನಿಧಾನಗತಿಯ ಬೌಲರ್‌ಗಳು ಯಶಸ್ಸು ಪಡೆಯುತ್ತಾರೆ. ಈ ಬಾರಿ ಬ್ಯಾಟ್ಸ್‌ಮನ್‌ಗಳೂ ಗಮನಾರ್ಹ ಯಶಸ್ಸು ಕಂಡರು. ರೌಂಡ್‌ರಾಬಿನ್‌ ಲೀಗ್‌ನಲ್ಲಿ ಹಲವು ಶತಕಗಳು ದಾಖಲಾದವು. ವಿಶೇಷವೆಂದರೆ ಬಲಿಷ್ಠ ತಂಡಗಳು ಆಡಿದ್ದ ನಾಕೌಟ್‌ನಲ್ಲಿ (ಸೆಮಿಫೈನಲ್‌, ಫೈನಲ್‌) ಒಂದೂ ಶತಕ ದಾಖಲಾಗಲಿಲ್ಲ.

ಈ ವಿಶ್ವಕಪ್‌ನ 48 ಪಂದ್ಯಗಳಲ್ಲಿ 31 ಶತಕಗಳು ದಾಖಲಾದವು. ಇದು ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚಿನ ಶತಕಗಳನ್ನು ಕಂಡ ವಿಶ್ವಕಪ್‌ ಎನಿಸಿತು. ಈ ಹಿಂದೆ ನಾಲ್ಕು ಬಾರಿ ಅತಿಥ್ಯ ವಹಿಸಿದಾಗಲೂ ಒಟ್ಟಾರೆ 27 ಶತಕಗಳಷ್ಟೇ ದಾಖಲಾಗಿದ್ದವು. ಆಗಿನ ವಿಶ್ವಕಪ್‌ಗಳಿಗೆ ಹೋಲಿಸಿದರೆಲ ಈಗ ಪಂದ್ಯಗಳ ಸಂಖ್ಯೆ ಹೆಚ್ಚಾಗಿರುವುದೂ ಇದಕ್ಕೆ ಒಂದು ಕಾರಣ. ಆದರೆ ಬ್ಯಾಟ್ಸ್‌ಮನ್‌ಗಳ ಗಮನಾರ್ಹ ಯಶಸ್ಸನ್ನು ಅಲ್ಲಗಳೆಯುವಂತಿಲ್ಲ. ರೋಹಿತ್‌ ಶರ್ಮಾ ದಾಖಲೆಯ ಐದು ಶತಕಗಳನ್ನು ಬಾರಿಸಿದರೆ, ಡೇವಿಡ್‌ ವಾರ್ನರ್ 3 ಶತಕಗಳ ಒಡೆಯರಾದರು.

ADVERTISEMENT

ಇಂಗ್ಲೆಂಡ್‌ 1975, 1979, 1983 ಹಾಗೂ 1999ರಲ್ಲಿ ಆತಿಥ್ಯ ವಹಿಸಿದ್ದಾಗ, ದಾಖಲಾಗಿದ್ದ ಶತಕಗಳು 27. ಈ ಬಾರಿ ಆರಂಭದಿಂದಲೇ ಶತಕಗಳು ಹರಿಯತೊಡಗಿದವು. ಭಾರತದ ರೋಹಿತ್‌ ಶರ್ಮಾ ಐದು ಶತಕಗಳನ್ನು ಹೊಡೆದು ‌ವಿಶ್ವದಾಖಲೆ ನಿರ್ಮಿಸಿದರು.

ವಿಶ್ವಕಪ್‌ ಶತಕಗಳ ಹಿನ್ನೆಲೆ
ಇಂಗ್ಲೆಂಡಿನ ಡೆನಿಸ್‌ ಅಮಿಸ್‌ 1975ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 137 ರನ್‌ ಬಾರಿಸಿ ಮೊದಲ ಶತಕದ ಗೌರವ ಪಡೆದಿದ್ದರು. ಎಂಟುತಂಡಗಳು ಭಾಗವಹಿಸಿದ್ದ ಆ ವಿಶ್ವಕಪ್‌ನಲ್ಲಿ ಒಟ್ಟು 6 ಶತಕಗಳು ದಾಖಲಾದವು.

1979ರ ವಿಶ್ವಕಪ್‌ನಲ್ಲಿ ಎಂಟು ತಂಡಗಳು ಭಾಗವಹಿಸಿದ್ದು 15 ಪಂದ್ಯಗಳು ನಡೆದಿದ್ದವು. ಆದರೆ ಇಲ್ಲಿ ಕೇವಲ ಎರಡು ಶತಕಗಳು ಮಾತ್ರ ದಾಖಲಾದವು. ಅತಿ ಕಡಿಮೆ ಶತಕಗಳನ್ನು ಕಂಡ ವಿಶ್ವಕಪ್‌ ಇದು. ಈ ಎರಡು ವಿಶ್ವಕಪ್‌ಗಳು ರೌಂಡ್‌ ರಾಬಿನ್‌ ಮತ್ತು ನಾಕೌಟ್‌ ಮಾದರಿಯಲ್ಲಿದ್ದವು.

1983ರ ವಿಶ್ವಕಪ್‌ನಲ್ಲಿ ಎಂಟು ಶತಕಗಳು ದಾಖಲಾದವು. ಏಷ್ಯ ಉಪಖಂಡದಲ್ಲಿ ನಡೆದ 1987ರ ರಿಲಯನ್ಸ್‌ ವಿಶ್ವಕಪ್‌ನಲ್ಲೂ ಎಂಟು ತಂಡಗಳು ಭಾಗವಹಿಸಿದ್ದವು. 27 ಪಂದ್ಯಗಳಲ್ಲಿ ಒಟ್ಟು 11 ಶತಕಗಳು ಬಂದವು.

1992ರ ವಿಶ್ವಕಪ್‌ನಲ್ಲಿ ಮೊದಲ ಬಾರಿ 9 ತಂಡಗಳು ಭಾಗವಹಿಸಿದ್ದವು. 39 ಪಂದ್ಯಗಳು ನಡೆದವು. ಒಟ್ಟುಎಂಟು ಶತಕಗಳು ಬಂದವು. ಎರಡನೇ ಬಾರಿ ಏಷ್ಯ ಉಪಖಂಡದಲ್ಲಿ ನಡೆದ 1996ರ ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದವು. 37 ಪಂದ್ಯಗಳಲ್ಲಿ 16 ಶತಕಗಳು ದಾಖಲಾದವು. ಸಚಿನ್‌ ತೆಂಡೂಲ್ಕರ್‌ ಒಟ್ಟು 523 ರನ್‌ ಬಾರಿಸಿ ಟೂರ್ನಿಯ ಉತ್ತಮ ಬ್ಯಾಟ್ಸ್‌ಮನ್‌ ಎನಿಸಿದರು. 1999ರ ವಿಶ್ವಕಪ್‌ ಆತಿಥ್ಯ ಮತ್ತೆ ಇಂಗ್ಲೆಂಡಿಗೆ ಮರಳಿತು. ಇದರಲ್ಲಿ 12 ತಂಡಗಳಿದ್ದು, 42 ಪಂದ್ಯಗಳು ನಡೆದವು. 11 ಶತಕಗಳು ಬಂದವು.

2003ರ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು. 54 ಪಂದ್ಯಗಳು ನಡೆದವು. ಒಟ್ಟು 21 ಶತಕಗಳು ದಾಖಲಾದವು.ಈ ಟೂರ್ನಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಒಟ್ಟು 673 ರನ್‌ ಗಳಿಸಿ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು. 2007ರ ವಿಶ್ವಕಪ್‌ನಲ್ಲಿ 51 ಪಂದ್ಯಗಳು ನಡೆದವು. 20 ಶತಕಗಳು ದಾಖಲಾದವು. 2011ರ ವಿಶ್ವಕಪ್‌ನಲ್ಲಿ 24 ಶತಕಗಳು ದಾಖಲಾದವು. 2015 ವಿಶ್ವಕಪ್‌ನಲ್ಲಿ 49 ಪಂದ್ಯಗಳಿದ್ದು, 38 ಶತಕಗಳು ಬಂದವು. ಆ ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಕ್ರಿಸ್‌ ಗೇಲ್‌, ಜಿಂಬಾಬ್ವೆ ಎದುರು ಪ್ರಥಮ ಬಾರಿ ವಿಶ್ವಕಪ್‌ನಲ್ಲಿ ದ್ವಿಶತಕ (215 ರನ್‌) ಸಿಡಿಸಿದರು.

ಡೇವಿಡ್‌ ವಾರ್ನರ್‌
ಸಚಿನ್‌ ತೆಂಡೂಲ್ಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.