ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಸೋಲಿಸಲು ಪಾಕಿಸ್ತಾನಕ್ಕೆ ಈ ಬಾರಿಯೂ ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಬಳಗದ ಶಿಸ್ತುಬದ್ಧ ಯೋಜನೆಯ ಆಟ ಮತ್ತು ಎರಡು ಬಾರಿ ಸುರಿದ ಮಳೆಯಲ್ಲಿ ಪಾಕ್ ತಂಡವು ಕೊಚ್ಚಿಹೋಯಿತು.
ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ 89 ರನ್‌ಗಳಿಂದ ಗೆದ್ದ ಭಾರತ ತಂಡವು ವಿಶ್ವಕಪ್ ಇತಿಹಾಸದಲ್ಲಿ ಸತತ ಏಳು ಸಲ ಪಾಕ್ ತಂಡವನ್ನು ಮಣಿಸಿದ ಇತಿಹಾಸ ಬರೆಯಿತು. ರೋಹಿತ್ ಶರ್ಮಾ (140; 113ಎಸೆತ, 14ಬೌಂಡರಿ, 3ಸಿಕ್ಸರ್) ಶತಕ, ಕನ್ನಡಿಗ ಕೆ.ಎಲ್. ರಾಹುಲ್ (57; 78ಎಸೆತ, 3ಬೌಂಡರಿ, 2ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (77; 67ಎಸೆತ; 7ಬೌಂಡರಿ) ಅವರ ಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 336 ರನ್ ಗಳಿಸಿತು.
ಇದನ್ನೂ ಓದಿ:ಏನಿದು ಡಕ್ವರ್ಥ್ ಲೂಯಿಸ್ ನಿಯಮ?
ಮಳೆಯಿಂದಾಗಿ ಪರಿಷ್ಕೃತಗೊಂಡ ಗುರಿ (40 ಓವರ್‌ಗಳಲ್ಲಿ 302 ) ಬೆನ್ನಟ್ಟಿದ ಪಾಕಿಸ್ತಾನ ತಂಡವು 6 ವಿಕೆಟ್‌ಗಳಿಗೆ 212 ರನ್ ಗಳಿಸಿತು. ಪಾಕ್ ತಂಡವು 35ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 166 ರನ್ ಗಳಿಸಿತ್ತು. ಆ ಸಂದರ್ಭದಲ್ಲಿ ಮಳೆ ಸುರಿದು ಸುಮಾರು ಅರ್ಧಗಂಟೆ ಆಟ ಸ್ಥಗಿತವಾಯಿತು. ನಂತರ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಗೆಲುವಿನ ಗುರಿಯನ್ನು ಪರಿಷ್ಕರಿಸಲಾಯಿತು. ಆಗ ಪಾಕ್ ತಂಡವು 30 ಎಸೆತಗಳಲ್ಲಿ 134 ರನ್ ಗಳಿಸಬೇಕಿತ್ತು. ಅದರಲ್ಲಿ 56 ರನ್‌ಗಳನ್ನು ಮಾತ್ರ ಗಳಿಸಲು ಪಾಕ್‌ಗೆ ಸಾಧ್ಯವಾಯಿತು.
ಇದರೊಂದಿಗೆ ಭಾರತ ತಂಡವು ಕೋಟಿ ಕೋಟಿ ಅಭಿಮಾನಿಗಳಿಗೆ ಜಯದ ಕಾಣಿಕೆ ನೀಡಿತು. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಪ್ರತಿಧ್ವನಿಸಿದವು.
ಮಳೆಯಾಟದ ಲೆಕ್ಕಾಚಾರ: ಪಂದ್ಯದಲ್ಲಿ ಮಧ್ಯದಲ್ಲಿ ಎರಡು–ಮೂರು ಬಾರಿ ಮಳೆ ಸುರಿಯುವ ಮನ್ಸೂಚನೆಯು ಮೊದಲೇ ಇತ್ತು. ಅದಕ್ಕೆ ತಕ್ಕಂತೆ ತನ್ನ ಆಟದ ಯೋಜನೆಯನ್ನು ಹೆಣೆದುಕೊಂಡಿದ್ದ ವಿರಾಟ್ ಕೊಹ್ಲಿ ಬಳಗವು ಯಶಸ್ಸು ಸಾಧಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕ್ ತಂಡಕ್ಕೆ ಭಾರತವು ಚಳ್ಳೇಹಣ್ಣು ತಿನ್ನಿಸಿತು. ತನ್ನ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ಮಳೆ ಸುರಿಯುವ ಮುನ್ನವೇ ಉತ್ತಮ ಮೊತ್ತ ಕಲೆಹಾಕುವತ್ತ ಹೆಜ್ಜೆಹಾಕಿತ್ತು.
ರೋಹಿತ್–ರಾಹುಲ್ ಜೊತೆಯಾಟ: ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರು ಎಲ್ಲ ಬೌಲರ್‌ಗಳಿಗೂ ಬಿಸಿ ಮುಟ್ಟಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಅವರು ಗಳಿಸಿದ 136 ರನ್‌ಗಳ ಬುನಾದಿಯ ಮೇಲೆ ತಂಡವು ದೊಡ್ಡ ಮೊತ್ತ ಕಲೆಹಾಕಿತು. ಅವರ ಆಟದ ಓಟಕ್ಕೆ ಪ್ರೇಕ್ಷಕರ ಗ್ಯಾಲರಿಯಲ್ಲಿ ತ್ರಿವರ್ಣ ಧ್ವಜಗಳು ನಲಿದಾಡಿದವು. ಹರ್ಷೋದ್ಘಾರಗಳು ಮುಗಿಲು ಮುಟ್ಟಿದವು. ರೋಹಿತ್ ಅವರು ಪಾಕ್‌ನ ಫೀಲ್ಡಿಂಗ್ ಲೋಪಗಳನ್ನು ಸಮರ್ಥವಾಗಿ ಬಳಸಿಕೊಂಡರು.
ಪುಲ್, ಕಟ್, ಡ್ರೈವ್‌ಗಳ ಮೂಲಕ ರನ್ ಗಳಿಸಿದರು. 85 ಎಸೆತಗಳಲ್ಲಿಯೇ ಶತಕದ ಗಡಿ ಮುಟ್ಟಿದರು. ಈ ಟೂರ್ನಿಯಲ್ಲಿ ಇದು ಅವರ ಎರಡನೇ ಶತಕ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಅವರು 122 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಇದು 24ನೇ ಶತಕ. ರಾಹುಲ್ ಔಟಾದ ನಂತರ ರೋಹಿತ್ ಅವರೊಂದಿಗೆ ಸೇರಿದ ವಿರಾಟ್ ಕೊಹ್ಲಿ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ಗಳನ್ನು ಸೇರಿಸಿದರು. ಹಸನ್ ಅಲಿ ಓವರ್‌ನಲ್ಲಿ ರೋಹಿತ್ ಔಟಾದರು. ಆಗಿನ್ನೂ ತಂಡದ ಮೊತ್ತ 250ರ ಗಡಿಯನ್ನೂ ತಲುಪಿರಲಿಲ್ಲ. ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 26 ರನ್‌ಗಳನ್ನು ಹೊಡೆದರು. ವಿರಾಟ್ ಕೂಡ ಚುರುಕಾಗಿ ಆಡಿದರು. 44ನೇ ಓವರ್‌ನಲ್ಲಿ ಹಾರ್ದಿಕ್ ಔಟಾದರು. ಮಹೇಂದ್ರಸಿಂಗ್ ಧೋನಿ ಒಂದು ರನ್ ಹೊಡೆದು ಔಟಾದರು. ಶಿಖರ್ ಬದಲು ಸ್ಥಾನ ಪಡೆದ ವಿಜಯಶಂಕರ್ ಕ್ರೀಸ್‌ಗೆ ಬಂದರು. 47ನೇ ಓವರ್‌ನಲ್ಲಿ ಮಳೆ ಸುರಿಯಿತು. ಸುಮಾರು ಅರ್ಧಗಂಟೆ ಆಟ ಸ್ಥಗಿತವಾಯಿತು. ಮತ್ತೆ ಪಂದ್ಯ ಶುರುವಾದ ಮೇಲೆ ವಿರಾಟ್ ಔಟಾದರು. ಆದರೆ ವಿಜಯಶಂಕರ್ ಮತ್ತು ಕೇದಾರ್ ಜಾಧವ್ ತಂಡದ ಮೊತ್ತ ಹೆಚ್ಚಿಸಿದರು.
ಯಾದವ–ವಿಜಯ: ಪಾಕ್ ತಂಡವು ಗುರಿ ಬೆನ್ನತ್ತಲು ಆರಂಭಿಸಿದಾಗ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು. ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಅವರು ತಮ್ಮ ಮೂರನೇ ಓವರ್ ಬೌಲಿಂಗ್ ಮಾಡುವಾಗ ಸ್ನಾಯುಸೆಳೆತದಿಂದ ಬಳಲಿದರು. ಪೆವಿಲಿಯನ್‌ಗೆ ಮರಳಿದರು.
ಅವರ ಬದಲಿಗೆ ಬೌಲಿಂಗ್ ಮಾಡಿದ ವಿಜಯಶಂಕರ್ ಇಮಾಮ್ ಉಲ್ ಹಕ್ ಅವರ ವಿಕೆಟ್ ಪಡೆದು, ಭಾರತಕ್ಕೆ ಆರಂಭ ನೀಡಿದರು. ಆದರೆ, ಫಕ್ರ್ ಜಮಾನ್ (62 ರನ್) ಮತ್ತು ಬಾಬರ್ ಅಜಂ (48 ರನ್) ಅವರು ಕ್ರೀಸ್‌ನಲ್ಲಿರುವವರೆಗೂ ತಂಡದ ಗೆಲುವಿನ ಆಸೆ ಜೀವಂತವಾಗಿತ್ತು. ಇವರ ಜೊತೆಯಾಟದಲ್ಲಿ 104 ರನ್ ಸೇರಿದವು. ಈ ಜೊತೆಯಾಟವನ್ನು 24ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಮುರಿದರು. ಆಜಂ ವಿಕೆಟ್ ಪಡೆದರು. ತಮ್ಮ ನಂತರದ ಓವರ್ನಲ್ಲಿ ಜಮಾನ್‌ಗೂ ಪೆವಲಿಯನ್ ಮಾರ್ಗ ತೋರಿದರು. ನಂತರ ವಿಜಯಶಂಕರ್ ಒಂದು ಮತ್ತು ಹಾರ್ದಿಕ್ ಪಾಂಡ್ಯ ಎರಡು ವಿಕೆಟ್‌ಗಳನ್ನು ಪಡೆದು ಭಾರತವನ್ನು ಜಯದತ್ತ ಮುನ್ನಡೆಸಿದರು.
ಧೋನಿ ದಾಖಲೆ ಮುರಿದ ರೋಹಿತ್!
ಮಹೇಂದ್ರಸಿಂಗ್ ಧೋನಿಯವರ ಹೆಸರಿನಲ್ಲಿದ್ದ ಗರಿಷ್ಠ ಸಂಖ್ಯೆಯ ಸಿಕ್ಸರ್ ದಾಖಲೆಯನ್ನು ರೋಹಿತ್ ಶರ್ಮಾ ಮುರಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 356 ಸಿಕ್ಸರ್‌ಗಳನ್ನು ಅವರ ಖಾತೆಯಲ್ಲಿವೆ.ಧೋನಿ ಹೆಸರಿನಲ್ಲಿ 355 ಸಿಕ್ಸರ್‌ಗಳಿವೆ. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಎದುರು ಶತಕ ಹೊಡೆದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2015ರ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.
ವಿರಾಟ್11 ಸಾವಿರ ರನ್
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಮಾಡಿದರು.
230 ಪಂದ್ಯಗಳಲ್ಲಿ ಈ ಮೈಲುಗಲ್ಲು ಮುಟ್ಟಿದ ಅವರು ಸಚಿನ್ ತೆಂಡೂಲ್ಕರ್ (284 ಪಂದ್ಯ) ದಾಖಲೆಯನ್ನು ಮುರಿದರು. ಈ ಪಂದ್ಯದಲ್ಲಿ ಅವರು 57 ರನ್ ಗಳಿಸಿದಾಗ ಈ ದಾಖಲೆ ತಲುಪಿದರು. ಇಲ್ಲಿ ಅವರು ಒಟ್ಟು 77 ರನ್ ಗಳಿಸಿದರು. ಹೋದ ಪಂದ್ಯದಲ್ಲಿ ಅವರು 82 ರನ್ ಹೊಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.