ಚೆಸ್ಟರ್ ಲೆ ಸ್ಟ್ರೀಟ್: ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ 23ರನ್‌ಗಳಿಂದ ವೆಸ್ಟ್ ಇಂಡೀಸ್‌ಗೆ ಸೋಲುಣಿಸಿದ ಶ್ರೀಲಂಕಾ ತಂಡವು ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.
ಎಂಟು ಪಂದ್ಯಗಳಿಂದ ಎಂಟು ಪಾಯಿಂಟ್ಸ್ ಕಲೆಹಾಕಿ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿರುವ ಸಿಂಹಳೀಯ ನಾಡಿನ ತಂಡವು ತನ್ನ ಪಾಲಿನ ಅಂತಿಮ ಹಣಾಹಣಿಯಲ್ಲಿ ಭಾರತದ ಎದುರು ಆಡಲಿದೆ. ಈ ಪಂದ್ಯದಲ್ಲಿ ದಿಮುತ್ ಕರುಣಾರತ್ನೆ ಪಡೆ ದೊಡ್ಡ ಅಂತರದಲ್ಲಿ ಗೆಲ್ಲುವ ಜೊತೆಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ಸೋಲಿಗಾಗಿ ಪ್ರಾರ್ಥಿಸಬೇಕಿದೆ!
ರಿವರ್ ಸೈಡ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿಂಡೀಸ್ ಗೆಲುವಿನ ಹಾದಿಯಲ್ಲಿ ಸಾಗಿತ್ತು. ನಿಕೊಲಸ್ ಪೂರನ್ (118; 103ಎ, 11ಬೌಂ, 4ಸಿ) ಆಕರ್ಷಕ ಶತಕ ಸಿಡಿಸಿ ಜಯದ ಆಸೆ ಚಿಗುರೊಡೆಯುವಂತೆ ಮಾಡಿದ್ದರು.
ನಿರ್ಣಾಯಕ ಘಟ್ಟದಲ್ಲಿ ಲಂಕಾ ತಂಡದ ನಾಯಕ ಕರುಣಾರತ್ನೆ ಮಹತ್ವದ ನಿರ್ಧಾರ ಕೈಗೊಂಡರು. 48ನೇ ಓವರ್ ಬೌಲ್ ಮಾಡಲು ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್‌ಗೆ ಚೆಂಡು ನೀಡಿದ್ದು ಫಲ ನೀಡಿತು. ತಾವೆಸೆದ ಮೊದಲ ಎಸೆತದಲ್ಲೇ ಪೂರನ್‌ಗೆ ಪೆವಿಲಿಯನ್ ಹಾದಿ ತೋರಿಸಿದ ಮ್ಯಾಥ್ಯೂಸ್, ಪಂದ್ಯಕ್ಕೆ ತಿರುವು ನೀಡಿದರು. ಫಾಬಿಯನ್ ಅಲೆನ್ (51; 32ಎ, 7ಬೌಂ, 1ಸಿ) ರನ್‌ಔಟ್ ಕೂಡಾ ವಿಂಡೀಸ್‌ಗೆ ಮುಳುವಾಯಿತು.
49ನೇ ಓವರ್‌ನಲ್ಲಿ ಲಸಿತ್ ಮಾಲಿಂಗ ಮ್ಯಾಜಿಕ್ ಮಾಡಿದರು. ವಿಂಡೀಸ್ ತಂಡ 9ಕ್ಕೆ 315 ರನ್ ಗಳಿಸಿ ಹೋರಾಟ ಮುಗಿಸಿತು.
ಮೊದಲು ಬ್ಯಾಟ್ ಮಾಡಿದ್ದ ಲಂಕಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗೆ 338ರನ್ ಪೇರಿಸಿತ್ತು. ಆವಿಷ್ಕಾ ಫರ್ನಾಂಡೊ ಒಳ ಗೊಂಡಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಜೊತೆಯಾಟ ಆಡಿದರು. ಕರುಣಾರತ್ನೆ ಮತ್ತು ಕುಶಾಲ್ ಪೆರೇರಾ (64; 51 ಎಸೆತ, 8 ಬೌಂಡರಿ) ಆರಂಭದಿಂದಲೇ ಭಾರಿ ಹೊಡೆತಗಳ ಮೂಲಕ ರಂಜಿಸಿದರು. 92 ಎಸೆತಗಳಲ್ಲಿ ಇವರಿಬ್ಬರು 93 ರನ್ ಕಲೆ ಹಾಕಿದರು. ಮೂರು ಓವರ್‌ಗಳ ಅಂತರದಲ್ಲಿ ಇವರು ಪೆವಿಲಿಯನ್‌ಗೆ ವಾಪಸಾದರು.
ಈ ಸಂದರ್ಭದಲ್ಲಿ ಜೊತೆಗೂಡಿದ ಆವಿಷ್ಕಾ ಮತ್ತು ಕುಶಾಲ್ ಮೆಂಡಿಸ್ ಅವರು ವೆಸ್ಟ್ ಇಂಡೀಸ್ ಬೌಲರ್‌ಗಳಿಗೆ ಮತ್ತೆ ಸಂಕಟ ಉಂಟು ಮಾಡಿದರು. ಇವರಿಬ್ಬರ ಜೊತೆಯಾಟದಲ್ಲಿ ಮೂರನೇ ವಿಕೆಟ್‌ಗೆ 85 ರನ್‌ಗಳು ಸೇರಿದವು. ಹೀಗಾಗಿ ತಂಡ 35 ಓವರ್‌ಗಳ ಮೊದಲೇ 200 ರನ್‌ಗಳ ಗಡಿ ದಾಟಿತು. ಮೆಂಡಿಸ್ ಔಟಾದ ನಂತರ ಫರ್ನಾಂಡೊ ಜೊತೆಗೂಡಿದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 20 ಎಸೆತಗಳಲ್ಲಿ 26 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಲು ನೆರವಾದರು.
ಮೊದಲ ಶತಕದ ಪುಳಕ: ಬೌಲರ್ ಗಳನ್ನು ನಿರಂತರವಾಗಿ ದಂಡಿಸಿದ ಆವಿಷ್ಕಾ ಫರ್ನಾಂಡೊ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವೈಯಕ್ತಿಕ ಶತಕ ಸಿಡಿಸಿದರು. ಎದುರಿಸಿದ 100ನೇ ಎಸೆತದಲ್ಲಿ ಮೂರಂಕಿ ಮೊತ್ತ ಗಳಿಸಿದ 21 ವರ್ಷದ ಫರ್ನಾಂಡೊ ಅಷ್ಟರಲ್ಲಿ ಎರಡು ಸಿಕ್ಸರ್ ಮತ್ತು ಎಂಟು ಬೌಂಡ ರಿಗಳನ್ನು ಬಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.