ADVERTISEMENT

ಕೊಹ್ಲಿ ಅರ್ಧ ಶತಕ, ಧೋನಿ–ಪಾಂಡ್ಯ ಜತೆಯಾಟ; ಕೆರೀಬಿಯನ್ನರಿಗೆ 269 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 14:13 IST
Last Updated 27 ಜೂನ್ 2019, 14:13 IST
   

ಮ್ಯಾಂಚೆಸ್ಟರ್:ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿಟಾಸ್‌ ಗೆದ್ದುಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ,ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಳ್ಳುವ ಮೂಲಕಆರಂಭಿಕ ಆಘಾತ ಅನುಭವಿಸಿತು. ರಾಹುಲ್–ಕೊಹ್ಲಿ ಜತೆಯಾಟ ತಂಡದ ರನ್‌ ಗಳಿಕೆಗೆ ಬುನಾದಿ ಹಾಕಿತು. ಅರ್ಧ ಶತಕ ಪೂರೈಸಿದ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ರೋಚ್‌ ಮತ್ತು ಹೋಲ್ಡ್‌ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರಾದರೂ, ಧೋನಿ–ಪಾಂಡ್ಯ ಜತೆಯಾಟದಿಂದ ತಂಡ ಉತ್ತಮ ಸ್ಕೋರ್‌ ದಾಖಲಿಸಿತು.

ಕ್ಷಣಕ್ಷಣದ ಸ್ಕೋರ್‌:https://bit.ly/31VGjP9

ಭಾರತ ನಿಗದಿತ 50ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 268ರನ್ ಗಳಿಸಿತು. ಅರ್ಧ ಶತಕ ಪೂರೈಸಿದವಿರಾಟ್‌ ಕೊಹ್ಲಿ(72)ತಂಡದ ರನ್‌ ಹೆಚ್ಚಿಸಲು ಪ್ರಯತ್ನಿಸಿದರು. ಕೊಹ್ಲಿ 37 ರನ್‌ ಗಳಿಸುತ್ತಿದ್ದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ 20 ಸಾವಿರ ರನ್‌ ಪೂರೈಸಿದ ದಾಖಲೆ ನಿರ್ಮಿಸಿದರು. ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಕೊಹ್ಲಿಗೆ ಇದು ಸತತ ನಾಲ್ಕನೇ ಅರ್ಧ ಶತಕವಾಗಿದೆ. ಹೋಲ್ಡರ್‌ ಎಸೆತದಲ್ಲಿ ಕೊಹ್ಲಿ ಕ್ಯಾಚ್‌ ನೀಡಿದರು.

ADVERTISEMENT

ಮಹೇಂದ್ರ ಸಿಂಗ್‌ ಧೋನಿ(56) ಮತ್ತು ಹಾರ್ದಿಕ್‌ ಪಾಂಡ್ಯ(46; 38 ಎಸೆತ) ಉತ್ತಮ ಜತೆಯಾಟ ಪ್ರರ್ದಶಿಸಿದರು. 48ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದಶೆಲ್ಡನ್‌ ಕಾಟ್ರೆಲ್‌ ಪಾಂಡ್ಯ ಮತ್ತು ಮೊಹಮ್ಮದ್‌ ಶಮಿ ವಿಕೆಟ್‌ ಕಬಳಿಸುವ ಮೂಲಕ ರನ್‌ ಹರಿಯುವಿಕೆ ತಡೆಯಾದರು. ವಿಕೆಟ್‌ ಕೀಪರ್‌ಶಾಯ್‌ ಹೋಪ್‌ ನಾಲ್ಕು ಕ್ಯಾಚ್‌ ಪಡೆದರು.

ಉತ್ತಮ ಪ್ರದರ್ಶನ ತೋರುತ್ತಿದ್ದ ರೋಹಿತ್‌ ಶರ್ಮಾ(18), ಕೆಮರ್‌ ರೋಚ್ ಎಸೆತದಲ್ಲಿ ಹೊರನಡೆದರು. ರೋಹಿತ್‌ ಬ್ಯಾಟ್‌ ಚೆಂಡಿಗೆ ತಾಕಿದ್ದರ ಬಗ್ಗೆ ರಿವ್ಯೂನಲ್ಲಿ ಔಟ್‌ ನೀಡಲಾಯಿತು. ಆದರೆ, ಆ ತೀರ್ಪು ಚರ್ಚೆಗೆ ಒಳಗಾಗಿದೆ. ತಂಡದ ರನ್‌ ಗಳಿಕೆಗೆ ಆಸರೆಯಾದ ರಾಹುಲ್‌(48), ಜಾಸನ್‌ ಹೋಲ್ಡರ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಆರ್ಭಟಿಸಲು ಮುಂದಾದ ವಿಜಯ ಶಂಕರ್‌(14), ಕೇದರ್‌ ಜಾದವ್‌(7) ಬಹುಬೇಗ ಹೊರನಡೆದರು.

ವೆಸ್ಟ್ ಇಂಡೀಸ್ ಪರ ಜೇಸನ್‌ ಹೋಲ್ಡರ್‌ ಮತ್ತುಶೆಲ್ಡನ್‌ ಕಾಟ್ರೆಲ್‌ ತಲಾ 2 ವಿಕೆಟ್‌ ಹಾಗೂ ಕೆಮರ್‌ ರೋಚ್‌ 3 ವಿಕೆಟ್‌ ಪಡೆದರು.

ಇದೇ ಕ್ರೀಡಾಂಗಣದಲ್ಲಿ 1983ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಗಿನ ದೈತ್ಯ ತಂಡ, ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಪ್ರಥಮ ಬಾರಿ ಭಾರತ ಸೋಲು ಕಾಣಿಸಿತ್ತು.1992ರ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಭಾರತ ಕಡೆಯದಾಗಿ ಸೋಲು ಕಂಡಿತ್ತು.

ಟಾಸ್‌ ಗೆದ್ದಿರುವ ಕೊಹ್ಲಿ, ಪಿಚ್‌ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೆರೀಬಿಯನ್‌ ತಂಡದ ಎವಿನ್‌ ಲೆವಿಸ್‌ ಮತ್ತು ಆ್ಯಶ್ಲೆ ನರ್ಸ್‌ ಬದಲು ಸುನಿಲ್‌ ಆಂಬ್ರಿಸ್‌ ಮತ್ತು ಫ್ಯಾಬಿಯನ್‌ ಆಲೆನ್‌ ಕಣಕ್ಕಿಳಿದಿದ್ದಾರೆ.

ವೆಸ್ಟ್ ಇಂಡೀಸ್‌ ವಿರುದ್ಧದ ಕೊನೆಯ ಆರು ಪಂದ್ಯಗಳ ಪೈಕಿ ವಿರಾಟ್‌ ಕೊಹ್ಲಿ ನಾಲ್ಕರಲ್ಲಿ ಶತಕ ಸಾಧನೆ ಮಾಡಿದ್ದಾರೆ.

ಕ್ರಿಸ್‌ ಗೇಲ್‌ 59 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ ಪರ ಅತಿ ಹೆಚ್ಚು ರನ್‌ ಗಳಿಕೆಯ ಕ್ರಿಕೆಟಿಗ ಎನಿಸಲಿದ್ದಾರೆ. 10,290 ರನ್‌ ಹೊಂದಿರುವ ಗೇಲ್‌ ಬ್ರಯನ್‌ ಲಾರಾ ಅವರ ಸಾಧನೆಗಿಂತ ಮುಂದೆ ಸಾಗಲು 59 ರನ್‌ಗಳ ಅವಶ್ಯಕತೆಯಿದೆ.

ಏಕದಿನ ಕ್ರಿಕೆಟ್‌ನಲ್ಲಿ ವೇಗದ 11 ಸಾವಿರ ರನ್‌ ಪೂರೈಸಿದ ದಾಖಲೆ ನಿರ್ಮಿಸಿರುವ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 20 ಸಾವಿರ ರನ್‌ ಗಳಿಸಿದ ದಾಖಲೆಗೆ ಪಾತ್ರರಾಗಲು ಅವರಿಗಿನ್ನು 37 ರನ್‌ಗಳ ಅವಶ್ಯಕತೆಯಿದೆ.

ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಒಂದೂ ಪಂದ್ಯ ಸೋತಿಲ್ಲ. ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಭಾರತವು ಭರ್ಜರಿ ಜಯ ಸಾಧಿಸಿತ್ತು. ಆದರೆ, ಅಫ್ಗಾನಿಸ್ತಾನ ಎದುರು ಪ್ರಯಾಸದ ಗೆಲುವು ಸಾಧಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಈ ಹಾದಿಯಲ್ಲಿ ರೋಹಿತ್ ಶರ್ಮಾ ಎರಡು ಶತಕ, ವಿರಾಟ್ ಕೊಹ್ಲಿ ಮೂರು ಅರ್ಧಶತಕ, ಕೆ.ಎಲ್. ರಾಹುಲ್ ಒಂದು ಅರ್ಧಶತಕ, ಜಸ್‌ಪ್ರೀತ್ ಬೂಮ್ರಾ ಒಂದು ಬಾರಿ ಪಂದ್ಯಶ್ರೇಷ್ಠ ಮತ್ತು ಮೊಹಮ್ಮದ್ ಶಮಿ ಹ್ಯಾಟ್ರಿಕ್ ಸಾಧನೆಗಳು ದಾಖಲಾಗಿವೆ. ಈ ನಡುವೆ ಒಂದು ಶತಕ ಬಾರಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡರು.

ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ವಿಂಡೀಸ್ ತಂಡದ ಖಾತೆಯಲ್ಲಿ ಉತ್ತಮ ರನ್‌ ಸರಾಸರಿ ಇದೆ. ಆದರೆ, ಕೇವಲ ಮೂರು ಪಾಯಿಂಟ್‌ಗಳಿವೆ. ಒಂದು ಪಂದ್ಯ ಸೋತರೂ ಸೆಮಿಫೈನಲ್‌ ಹಾದಿಯಿಂದ ತಂಡವು ಹೊರಬೀಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.