ಮೊದಲ ವಿಶ್ವಕಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಬಳಗ ಎರಡನೇ ಬಾರಿಯೂ ವಿಶ್ವ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ನಾಲ್ಕು ವರ್ಷಗಳ ಹಿಂದೆ ಜೂನ್ 21ರಂದು ಫೈನಲ್ ಪಂದ್ಯ ನಡೆದಿದ್ದರೆ ಈ ಬಾರಿ ಜೂನ್ 23ರಂದು ಪ್ರಶಸ್ತಿ ಹಂತದ ಪಂದ್ಯ ನಡೆದಿತ್ತು. ಮೊದಲ ಬಾರಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರಾಳಿಯಾಗಿದ್ದರೆ, ಈ ಬಾರಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಅದರ ತವರಿನಲ್ಲೇ ಮಣಿಸಿ ಕೇಕೆ ಹಾಕಿತು.
* ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 92 ರನ್‌ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ತಂಡ 60 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 286 ರನ್ ಗಳಿಸಿತ್ತು. ಇಂಗ್ಲೆಂಡ್ 51 ಓವರ್‌ಗಳಲ್ಲಿ 194 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು.
* 22 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ 36 ರನ್ ಗಳಿಸುವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತ್ತು. ಮೂರನೇ ಕ್ರಮಾಂಕದ ವಿವಿಯನ್ ರಿಚರ್ಡ್ಸ್ ಕ್ರೀಸ್‌ನಲ್ಲಿ ಭದ್ರವಾಗಿ ತಳವೂರಿದ್ದರು. ಆಲ್ವಿನ್ ಕಾಲಿಚರಣ್ ಮತ್ತು ಕ್ಲೈವ್ ಲಾಯ್ಡ್ ಕೂಡ ಬೇಗನೇ ಔಟಾಗಿದ್ದರು.
* ವಿವಿಯನ್ ರಿಚರ್ಡ್ಸ್ ಜೊತೆಗೂಡಿದ ಆರನೇ ಕ್ರಮಾಂಕದ ಕಾಲಿಸ್ ಕಿಂಗ್ ಐದನೇ ವಿಕೆಟ್‌ಗೆ 139 ರನ್ ಸೇರಿಸಿದರು. ಮೂರು ಸಿಕ್ಸರ್ ಮತ್ತು 10 ಬೌಂಡರಿ ಒಳಗೊಂಡು 66 ಎಸೆತಗಳಲ್ಲಿ 86 ರನ್ ಗಳಿಸಿದ ಕಿಂಗ್ ಔಟಾದಾಗ ತಂಡ 238 ರನ್ ಗಳಿಸಿ ಭದ್ರವಾಗಿತ್ತು.
* ಕೊನೆಯ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟಲಾಗದೆ ವಾಪಸಾಗಿದ್ದರು. ವಿವಿಯನ್ ರಿಚರ್ಡ್ಸ್ ಮಾತ್ರ ಅಜೇಯರಾಗಿ ಉಳಿದಿದ್ದರು. 207 ನಿಮಿಷ ಕ್ರೀಸ್‌ನಲ್ಲಿದ್ದ ಅವರು ಮೂರು ಸಿಕ್ಸರ್ ಮತ್ತು 11 ಬೌಂಡರಿ ಸಿಡಿಸಿದ್ದರು. 157 ಎಸೆತಗಳಲ್ಲಿ ಅವರ ಗಳಿಕೆ 138 ರನ್‌ಗಳು.
* ನಾಯಕ ಮೈಕ್ ಬ್ರೇರ್ಲಿ ಮತ್ತು ಜೆಫ್ ಬಾಯ್ಕಾಟ್ ಮೊದಲ ವಿಕೆಟ್‌ಗೆ ಸೇರಿಸಿದ 129 ರನ್‌ಗಳ ಜೊತೆಯಾಟ ಇಂಗ್ಲೆಂಡ್ ತಂಡದಲ್ಲಿ ಭರವಸೆ ಮೂಡಿಸಿತ್ತು. ಆದರೆ ಅಗ್ರ ಕ್ರಮಾಂಕದ ನಾಲ್ವರನ್ನು ಬಿಟ್ಟರೆ ಉಳಿದವರೆಲ್ಲರೂ ಎರಡಂಕಿ ಮೊತ್ತ ದಾಟಲಾಗದೆ ಮರಳಿದರು. 38ಕ್ಕೆ5 ವಿಕೆಟ್ ಕಬಳಿಸಿದ ಜೊಯೆಲ್ ಗಾರ್ನರ್ ಇಂಗ್ಲೆಂಡ್ ತಂಡದ ನಿರೀಕ್ಷೆಗೆ ತಣ್ಣೀರು ಹಾಕಿದರು. ಕಾಲಿನ್ ಕ್ರಾಫ್ಟ್ 42ಕ್ಕೆ3, ಮೈಕೆಲ್ ಹೋಲ್ಡಿಂಗ್ 16ಕ್ಕೆ2 ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.