ಮುಂಬೈ: ನ್ಯೂಜಿಲೆಂಡ್ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತವೇ ಜಯಿಸುವ ನೆಚ್ಚಿನ ತಂಡವಾಗಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
‘ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಕಳೆದೆರಡು ವರ್ಷಗಳ ಅವಧಿಯಲ್ಲಿ ಭಾರತ ತಂಡವು ಸ್ಥಿರ ಪ್ರದರ್ಶನ ನೀಡಿದೆ. ಉತ್ತಮವಾಗಿ ಆಡುತ್ತ ಫೈನಲ್ ಪ್ರವೇಶಿಸಿದೆ. ಸ್ವದೇಶ ಮತ್ತು ವಿದೇಶಗಳ ಪಿಚ್‌ಗಳಲ್ಲಿ ಸಾಧನೆ ಮಾಡಿರುವುದು ವಿಶೇಷ‘ ಎಂದು ಮಂಗಳವಾರ ‘ಸ್ಟಾರ್ ಸ್ಪೋರ್ಟ್ಸ್‘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಹೇಳಿದರು.
‘ಆಸ್ಟ್ರೇಲಿಯಾ ತಂಡವನ್ನು ಅದರ ತವರು ನೆಲದಲ್ಲಿಯೇ ಸೋಲಿಸಿದ್ದು ಬಹುದೊಡ್ಡ ಸಾಧನೆ. ಏಕೆಂದರೆ, ಆ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಅತ್ಯಂತ ಹೀನಾಯವಾಗಿ ಸೋತಿತ್ತು. ಅದರ ನಂತರ ಪುಟಿದೆದ್ದ ರೀತಿ ಅನನ್ಯವಾದದ್ದು. ನಾಯಕ ವಿರಾಟ್ ಕೊಹ್ಲಿ ಅವರ ಗೈರುಹಾಜರಿಯಲ್ಲಿಯೂ ಯುವ ಆಟಗಾರರು ದಾಖಲೆ ಬರೆದರು‘ ಎಂದು ಲಕ್ಷ್ಮಣ್ ಶ್ಲಾಘಿಸಿದರು.
ಇದೇ ಸಂದರ್ಭಧಲ್ಲಿ ಹಾಜರಿದ್ದ ನ್ಯೂಜಿಲೆಂಡ್ ನ ಮಾಜಿ ಆಟಗಾರ ಶೇನ್ ಬಾಂಡ್, ‘ಕಿವೀಸ್ ಬಳಗವು ಈಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಿ ಗೆದ್ದಿದೆ. ಆದ್ದರಿಂದ ತಂಡದ ಆತ್ಮವಿಶ್ವಾಸವೂ ಹೆಚ್ಚಿದೆ. ಆದರೆ ಭಾರತದ ಸಾಮರ್ಥ್ಯವನ್ನು ಕಡೆಗಣಿಸುವಂತಿಲ್ಲ‘ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಸ್ಟಾರ್ ಮತ್ತು ಡಿಸ್ನಿ ಇಂಡಿಯಾದ ಕ್ರೀಡಾ ಮುಖ್ಯಸ್ಥ ಸಂಜೋಗ್ ಗುಪ್ತಾ, ‘ಕ್ರಿಕೆಟ್ ಲೋಕಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯವು ಕಿರೀಟಪ್ರಾಯವಾದದ್ದು. ಇದೊಂದು ಐತಿಹಾಸಿಕ ಪಂದ್ಯವಾಗಲಿದೆ. ಕ್ರಿಕೆಟ್ ಜಗತ್ತಿನ ಮೊಟ್ಟಮೊದಲ ವಿಶ್ವ ಚಾಂಪಿಯನ್ ತಂಡವು ಹೊರಹೊಮ್ಮಲಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.