ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ, ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ 143 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 207 ರನ್ ಗಳಿಸಿತು. ಜೈಂಟ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಹರ್ಮನ್ 30 ಎಸೆತಗಳಲ್ಲಿ 65 ರನ್ ಕಲೆಹಾಕಿದರು. 14 ಬೌಂಡರಿಗಳನ್ನು ಹೊಡೆದರು. ಆರಂಭಿಕ ಬ್ಯಾಟರ್ ಹೇಯ್ಲಿ ಮ್ಯಾಥ್ಯೂಸ್ (47 ರನ್, 31 ಎ., 4X3, 6X4) ಮತ್ತು ಅಮೇಲಿ ಕೆರ್ (ಔಟಾಗದೆ 45, 24 ಎ., 4X6, 6X1) ಅವರೂ ತಂಡದ ಬೃಹತ್ ಮೊತ್ತಕ್ಕೆ ಕಾಣರಾದರು.
ಗುಜರಾತ್ ತಂಡ 15.1 ಓವರ್ ಗಳಲ್ಲಿ ಕೇವಲ 64 ರನ್ ಕಲೆಹಾಕಿತು. ಡಿ.ಹೇಮಲತಾ (ಔಟಾಗದೆ 29) ಮತ್ತು ಮೋನಿಕಾ ಪಟೇಲ್ (10) ಮಾತ್ರ ಎರಡಂಕಿಯ ಮೊತ್ತ ತಲುಪಿದರು. ಸಾಯಿಕಾ ಇಶಾಕ್ (11ಕ್ಕೆ 4) ಮುಂಬೈ ಪರ ಬಿಗುವಾದ ದಾಳಿ ನಡೆಸಿದರು.
ಮಿಂಚಿದ ಹರ್ಮನ್, ಮ್ಯಾಥ್ಯೂಸ್: ಟಾಸ್ ಗೆದ್ದ ಜೈಂಟ್ಸ್ ತಂಡದ ನಾಯಕಿ ಬೆಥ್ ಮೂನಿ, ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಯಸ್ಟಿಕಾ ಭಾಟಿಯಾ (1) ಅವರನ್ನು ಮುಂಬೈ ತಂಡ ಬೇಗನೇ ಕಳೆದುಕೊಂಡಿತು.
ಎರಡನೇ ವಿಕೆಟ್‌ಗೆ ಜತೆಯಾದ ಮ್ಯಾಥ್ಯೂಸ್ ಮತ್ತು ನಥಾಲಿ ಸಿವೆರ್ ಬ್ರಂಟ್ (23 ರನ್, 18 ಎ.) ತಂಡದ ನೆರವಿಗೆ ನಿಂತರು. ಇವರಿಬ್ಬರು 44 ರನ್ ಸೇರಿಸಿದರು. ಎಂಟು ರನ್‌ಗಳ ಅಂತರದಲ್ಲಿ ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿದ ಜೈಂಟ್ಸ್ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು.
ಆದರೆ ಹರ್ಮನ್ ಮತ್ತು ಅಮೇಲಿ ಕೆರ್ ಬಿರುಸಿನ ಆಟವಾಡಿ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 42 ಎಸೆತಗಳಲ್ಲಿ 89 ರನ್ ಸೇರಿಸಿತು.
ಹರ್ಮನ್ ಅವರನ್ನು ಔಟ್ ಮಾಡಿದ ಸ್ನೇಹಾ ರಾಣಾ ಈ ಜತೆಯಾಟ ಮುರಿದರು. ಕೊನೆಯಲ್ಲಿ ಪೂಜಾ ವಸ್ತ್ರಕರ್ (15 ರನ್, 8 ಎ.) ರನ್‌ರೇಟ್ ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 207 (ಹೇಯ್ಲಿ ಮ್ಯಾಥ್ಯೂಸ್ 47, ನಥಾಲಿ ಸಿವೆರ್ ಬ್ರಂಟ್ 23, ಹರ್ಮನ್‌ಪ್ರೀತ್ ಕೌರ್ 65, ಅಮೇಲಿ ಕೆರ್ ಔಟಾಗದೆ 45, ಪೂಜಾ ವಸ್ತ್ರಕರ್ 15, ಆ್ಯಶ್ಲಿ ಗಾರ್ಡನರ್ 38ಕ್ಕೆ 1, ತನುಜಾ ಕನ್ವರ್ 12ಕ್ಕೆ 1, ಸ್ನೇಹಾ ರಾಣಾ 43ಕ್ಕೆ 2)
ಗುಜರಾತ್ ಜೈಂಟ್ಸ್: 15.1 ಓವರ್‌ಗಳಲ್ಲಿ 64 (ಡಿ.ಹೇಮಲತಾ ಔಟಾಗದೆ 29, ಮೋನಿಕಾ ಪಟೇಲ್ 10, ಸಾಯಿಕಾ ಇಶಾಕ್ 11ಕ್ಕೆ 4, ನಥಾಲಿ ಸಿವೆರ್ ಬ್ರಂಟ್ 5ಕ್ಕೆ 2, ಅಮೇಲಿ ಕೆರ್ 12ಕ್ಕೆ 2, ಇಸಿ ವಾಂಗ್ 7ಕ್ಕೆ 1) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 143 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.