ಬೆಂಗಳೂರು: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಆಟಗಾರ್ತಿಯರಿಗಾಗಿ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಜೆರ್ಸಿ ಧರಿಸಿರುವ ಆಟಗಾರ್ತಿಯರ ಚಿತ್ರಗಳನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗುರುವಾರ ಹಂಚಿಕೊಂಡಿದೆ.
ಜೆರ್ಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್‌ಸಿಬಿ ಅಭಿಮಾನಿಗಳು, ’ಇದು ತುಂಬಾ ಚೆನ್ನಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಚೊಚ್ಚಲ ಡಬ್ಲ್ಯುಪಿಎಲ್ ಆವೃತ್ತಿ ಮಾರ್ಚ್ 4 ರಂದು ಪ್ರಾರಂಭವಾಗಲಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ.
ಲೀಗ್‌ನ(ಡಬ್ಲ್ಯುಪಿಎಲ್) ಚೊಚ್ಚಲ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡದ ನಾಯಕಿಯಾಗಿ ಸ್ಮೃತಿ ಮಂದಾನಾ ಅವರನ್ನು ನೇಮಕ ಮಾಡಲಾಗಿದೆ.
ಭಾರತ ಮಹಿಳೆಯರ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂದಾನಾ, ಇತ್ತೀಚೆಗೆ ನಡೆದ ಡಬ್ಲ್ಯುಪಿಎಲ್ ಹರಾಜಿನಲ್ಲಿ ₹3.40 ಕೋಟಿಗೆ ಆರ್‌ಸಿಬಿ ತಂಡ ಸೇರಿದ್ದರು. ಡಬ್ಲ್ಯುಪಿಎಲ್ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿ ಎಂಬ ಹಿರಿಮೆಗೆ ಆಕೆ ಪಾತ್ರರಾದರು.
ಮುಂಬೈನ ಈ ಆರಂಭಿಕ ಆಟಗಾರ್ತಿ ಭಾರತೀಯ ಮಹಿಳಾ ರಾಷ್ಟ್ರೀಯ ತಂಡದ ಉಪನಾಯಕಿ ಕೂಡ. ದೇಶಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ತಂಡದ ಪರ ಅವರು ಆಡುವರು. ಐಸಿಸಿ ಮತ್ತು ಬಿಸಿಸಿಐಯಿಂದ ‘ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟರ್’ ಪ್ರಶಸ್ತಿಯನ್ನೂ ಸ್ಮೃತಿ ಪಡೆದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತಂಡಕ್ಕೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ತನ್ನ ಮೆಂಟರ್ ಆಗಿ ಆರ್‌ಸಿಬಿ ನೇಮಿಸಿಕೊಂಡಿದೆ. ಆಸ್ಟ್ರೇಲಿಯಾದ ಬೆನ್ ಸಾಯರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.