ADVERTISEMENT

ಶೆಫಾಲಿ, ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್; ಆರ್‌ಸಿಬಿಗೆ ಬೃಹತ್ ಗುರಿ ನೀಡಿದ ಡೆಲ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2023, 11:48 IST
Last Updated 5 ಮಾರ್ಚ್ 2023, 11:48 IST
ಬ್ಯಾಟಿಂಗ್‌ ವೇಳೆ  ಮೆಗ್‌ ಲ್ಯಾನಿಂಗ್‌ (ಎಡ) ಹಾಗೂ ಶೆಫಾಲಿ ವರ್ಮಾ (ಪಿಟಿಐ ಚಿತ್ರ)
ಬ್ಯಾಟಿಂಗ್‌ ವೇಳೆ ಮೆಗ್‌ ಲ್ಯಾನಿಂಗ್‌ (ಎಡ) ಹಾಗೂ ಶೆಫಾಲಿ ವರ್ಮಾ (ಪಿಟಿಐ ಚಿತ್ರ)   

ಮುಂಬೈ: ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಹಾಗೂ ಮೆಗ್‌ ಲ್ಯಾನಿಂಗ್‌ ತೋರಿದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಗೆಲುವಿಗೆ 224 ರನ್‌ಗಳ ಬೃಹತ್‌ ಗುರಿ ನೀಡಿದೆ.

ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಆದರೆ, ಅವರ ನಿರ್ಧಾರವನ್ನು ಸಮರ್ಥಿಸುವಲ್ಲಿ ಬೌಲರ್‌ಗಳು ವಿಫಲರಾದರು.

ಡೆಲ್ಲಿ ಪರ ಇನಿಂಗ್ಸ್‌ ಆರಂಭಿಸಿದ ಶೆಫಾಲಿ ಹಾಗೂ ನಾಯಕಿ ಲ್ಯಾನಿಂಗ್‌ ಆರ್‌ಸಿಬಿಯ ಎಲ್ಲ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 14.3 ಓವರ್‌ಗಳಲ್ಲಿ 162 ರನ್‌ ಕಲೆಹಾಕಿತು. 45 ಎಸೆತಗಳನ್ನು ಎದುರಿಸಿದ ಶೆಫಾಲಿ 10 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಹಿತ 84 ರನ್‌ ಚಚ್ಚಿದರು. ಅವರಿಗೆ ಉತ್ತಮ ನೆರವು ನೀಡಿದ ಲ್ಯಾನಿಂಗ್‌ 43 ಎಸೆತಗಳಲ್ಲಿ 73 ರನ್‌ ಬಾರಿಸಿ ಮಿಂಚಿದರು.

ADVERTISEMENT

ಕೊನೆಯಲ್ಲಿ ಗುಡುಗಿದ ಮೆರಿಜನ್‌ ಕಾಪ್‌ (ಅಜೇಯ 39 ರನ್‌) ಹಾಗೂ ಜೆಮಿಮಾ ರಾಡ್ರಿಗಸ್‌ (ಅಜೇಯ 22 ರನ್‌) ತಮ್ಮ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 31 ಎಸೆತಗಳಲ್ಲಿ 60 ರನ್‌ ಚಚ್ಚಿದರು.

ಆಸ್ಟ್ರೇಲಿಯಾದ ಮೇಗನ್‌ ಶುಟ್‌ 4 ಓವರ್‌ಗಳಲ್ಲಿ 45 ರನ್‌ ಬಿಟ್ಟುಕೊಟ್ಟರೆ, ನ್ಯೂಜಿಲೆಂಡ್‌ ಸೋಫಿ ಡಿವೈನ್‌ ಒಂದೇ ಓವರ್‌ನಲ್ಲಿ 20 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಇಂಗ್ಲೆಂಡ್‌ನ ಹೆಥರ್ ನೈಟ್‌ 3 ಓವರ್‌ಗಳಲ್ಲಿ 40 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಉಳಿದ ಯಾರಿಗೂ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.