ಬೆಂಗಳೂರು: ಆರಂಭಿಕ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಎಲ್ಲಿಸ್ ಪೆರ್ರಿ ಹಾಗೂ ಶ್ರೇಯಾಂಕಾ ಪಾಟೀಲ್ ಅವರ ಶ್ರಮದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು, ಮುಂಬೈ ಇಂಡಿಯನ್ಸ್‌ಗೆ 132 ರನ್‌ಗಳ ಗುರಿ ನೀಡಿತು.
ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಆರ್‌ಸಿಬಿ ವಿರುದ್ಧ ಕರಾರುವಕ್ಕಾದ ಬೌಲಿಂಗ್ ಪ್ರದರ್ಶನ ನೀಡಿತು. ಇದರ ಪರಿಣಾಮ ನಾಯಕಿ ಸ್ಮೃತಿ ಮಂದಾನ ಸೇರಿದಂತೆ 50 ರನ್ ಗಳಿಸುವಷ್ಟರಲ್ಲಿ ನಾಲ್ಕು ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್‌ಗೆ ಮರಳಿದರು.
5 ಬೌಂಡ್ರಿಗಳೊಂದಿಗೆ 38 ಬಾಲ್ ಎದುರಿಸಿ 44 ರನ್ ಕಲೆಹಾಕಿದ ಎಲ್ಲಿಸ್ ಪೆರ್ರಿ ಅವರ ಪ್ರಯತ್ನದಿಂದಾಗಿ ಆರ್‌ಸಿಬಿ ತಂಡ 131 ರನ್ ದಾಖಲಿಸಿತು. ಇವರಿಗೆ ತುಸು ಮಟ್ಟಿನ ಸಾಥ್ ನೀಡಿದವರು ಜಾರ್ಜಿಯಾ ವೇರ್ಹ್ಯಾಮ್. 20 ಬಾಲ್ ಎದುರಿಸಿ 3 ಬೌಂಡ್ರಿಗಳೊಂದಿಗೆ 27 ರನ್‌ಗಳನ್ನು ಇವರು ಕಲೆ ಹಾಕಿದರು.
ಸ್ಮೃತಿ ಮಂದಾನ–9, ಸೋಫಿ ಡಿವೈನ್ 9, ಸಬ್ಬಿನೇನಿ ಮೇಘನಾ– 11, ರಿಚಾ ಘೋಷ್– 7, ಸೋಫಿ ಮಾಲಿನಿಕ್ಸ್–12, ಶ್ರೇಯಾಂಕ ಪಾಟೀಲ್ ಔಟಾಗದೆ 7 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರವಾಗಿ ನಥಾಲಿ ಶಿವರ್ ಬ್ರಂಟ್ ಹಾಗೂ ಪೂಜಾ ವಸ್ತ್ರಾಕರ್ ತಲಾ 2 ವಿಕೆಟ್ ಕಬಳಿಸಿದರು. ಇಸ್ಸಿ ವಾಂಗ್, ಸೈಕಾ ಇಶಾಕ್ ತಲಾ ಒಂದು ವಿಕೆಟ್ ಪಡೆದರು.
ಆರ್‌ಸಿಬಿ ನೀಡಿದ 132 ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ವನಿತೆಯರು 11.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್ ಕಲೆ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.