ADVERTISEMENT

ಬಾಲಿವುಡ್ ರಂಗಿನಲ್ಲಿ ಅರಳಲಿದೆ ಡಬ್ಲ್ಯುಪಿಎಲ್: ಇಂದಿನಿಂದ ಮಹಿಳಾ ಟಿ20

ಮುಂಬೈಗೆ ‘ಕ್ಯಾಪಿಟಲ್ಸ್’ ಸವಾಲು

ಗಿರೀಶ ದೊಡ್ಡಮನಿ
Published 23 ಫೆಬ್ರುವರಿ 2024, 3:27 IST
Last Updated 23 ಫೆಬ್ರುವರಿ 2024, 3:27 IST
<div class="paragraphs"><p>ಟಾಟಾ ಮಹಿಳಾ ಪ್ರೀಮಿಯರ್ ಲೀಗ್‌ ಉದ್ಘಾಟನೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಕಾರ್ಯಕ್ರಮ ನೀಡಲು ಅಭ್ಯಾಸದಲ್ಲಿ ತೊಡಗಿದ್ದರು<br>&nbsp;&nbsp;&nbsp;&nbsp;ಪ್ರಜಾವಾಣಿ ಚಿತ್ರಗಳು/ ಕಿಶೋರ್ ಕುಮಾರ್ ಬೋಳಾರ್</p></div>

ಟಾಟಾ ಮಹಿಳಾ ಪ್ರೀಮಿಯರ್ ಲೀಗ್‌ ಉದ್ಘಾಟನೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಕಾರ್ಯಕ್ರಮ ನೀಡಲು ಅಭ್ಯಾಸದಲ್ಲಿ ತೊಡಗಿದ್ದರು
    ಪ್ರಜಾವಾಣಿ ಚಿತ್ರಗಳು/ ಕಿಶೋರ್ ಕುಮಾರ್ ಬೋಳಾರ್

   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಝಗಮಗಿಸುವ ದೀಪಗಳ ಬೆಳಕು ಚೆಲ್ಲಿತ್ತು. ಅದನ್ನು ಮೀರಿಸುವ ಪೈಪೋಟಿಯಲ್ಲಿ  ಬಾಲಿವುಡ್ ತಾರೆಯರ ಹೊಳಪು ಕೂಡ ಹರಡಿತ್ತು. ಆ ಸೂಪರ್‌ಸ್ಟಾರ್‌ ಗಳನ್ನು ಕಣ್ಣರಳಿಸಿ ನೋಡುತ್ತ ನಿಂತಿದ್ದವರು ಮಹಿಳಾ ಕ್ರಿಕೆಟ್ ತಾರೆಯರು. ಅವರೆಲ್ಲರನ್ನೂ ನೋಡುತ್ತ ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಿದ್ದವರ ದಂಡು ಪ್ರೇಕ್ಷಕರ ಗ್ಯಾಲರಿಯಲ್ಲಿತ್ತು. 

ಶುಕ್ರವಾರ ಇಲ್ಲಿ ಆರಂಭವಾಗಲಿರುವ  ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನೆಗೆ ನಡೆಯಲಿರುವ ಅದ್ದೂರಿ ಕಾರ್ಯಕ್ರಮದ ತಯಾರಿಯಲ್ಲಿದ್ದ ಬಾಲಿವುಡ್ ನಟರಾದ ಶಾರುಖ್ ಖಾನ್, ಟೈಗರ್ ಶ್ರಾಫ್, ಶಾಹೀದ್ ಕಪೂರ್ ಮತ್ತು ವರುಣ್ ಧವನ್ ಅವರು ನೃತ್ಯದ ತಾಲೀಮು ನಡೆಸಿದರು. ಆ ವೇದಿಕೆಯ ಹಿಂಭಾಗದಲ್ಲಿಯೇ ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿಯರೂ ಕ್ರಿಕೆಟ್ ಅಭ್ಯಾಸ ಮಾಡಿದರು. ಆಗಾಗ ವೇದಿಕೆಯ ಬಳಿ ಸಾಗಿ ಸಿನಿತಾರೆಯರ ‘ರಿಹರ್ಸಲ್’ ವೀಕ್ಷಿಸಿದರು.

ADVERTISEMENT

ಹೋದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ಸ್ ಅಪ್ ಡೆಲ್ಲಿ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮಾರ್ಚ್‌ 4ರವರೆಗೆ ಇದೇ ತಾಣದಲ್ಲಿ ಒಟ್ಟು ಹನ್ನೊಂದು ಪಂದ್ಯಗಳು ನಡೆಯಲಿವೆ. ಐದು ತಂಡಗಳು ಪೈಪೋಟಿ ನಡೆಸಲಿವೆ. ನಂತರದ ಹಂತದ ಪಂದ್ಯಗಳು ದೆಹಲಿಯಲ್ಲಿ ನಡೆಯಲಿವೆ.

ಯುವ ಆಟಗಾರ್ತಿಯರಿಗೆ ಅವಕಾಶ: ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆಗುರುತು ಮೂಡಿಸುವ ಛಲದಲ್ಲಿರುವ ಯುವ ಆಟಗಾರ್ತಿಯರಿಗೆ ಈ ಟೂರ್ನಿಯಲ್ಲಿ ಅನುಭವಿ ಆಟಗಾರ್ತಿಯರೊಂದಿಗೆ ಆಡುವ ಅವಕಾಶ ದೊರೆಯುತ್ತಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಮೆಗ್ ಲ್ಯಾನಿಂಗ್ ಅವರು ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡದಲ್ಲಿರುವ ಭಾರತದ ಉದಯೋನ್ಮುಖ ಆಟಗಾರ್ತಿ ತಿತಾಸ್ ಸಾಧು, ರಾಧಾ ಯಾದವ್, ಶಿಖಾ ಪಾಂಡೆ ಅವರಂತಹವರಿಗೆ ಉತ್ತಮ ಮಾರ್ಗದರ್ಶನ ದೊರೆಯುವ ನಿರೀಕ್ಷೆ ಇದೆ. 

‘ಭಾರತದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಮಹಿಳೆಯರು ಬೆಳೆಯಲು ಹೆಚ್ಚಿನ ಅವಕಾಶವನ್ನು ಡಬ್ಲ್ಯುಪಿಎಲ್ ನೀಡುತ್ತಿದೆ. ಇದರಿಂದಾಗಿ ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆ ಏರುಗತಿಯಲ್ಲಿದೆ’ ಎಂದು ಮೆಗ್‌ ಲ್ಯಾನಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಂಬೈ ತಂಡವು ತನ್ನ ಗೆಲುವಿನ ಓಟವನ್ನು ಈ ಬಾರಿಯೂ ಮುಂದುವರಿಸುವ ಛಲದಲ್ಲಿದೆ. ಹೋದ ವರ್ಷ ಇದ್ದ ಬಹುತೇಕ ಆಟಗಾರ್ತಿಯರು ಈ ಸಲವೂ ಇದ್ದಾರೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡದಲ್ಲಿ ನಥಾಲಿ  ಶಿವರ್, ಅಮೆಲಿಯಾ  ಕೆರ್, ಹಯಲಿ ಮ್ಯಾಥ್ಯೂಸ್ ಅವರು ಪ್ರಮುಖರಾಗಿದ್ದಾರೆ. ಯುವ ಆಟ ಗಾರ್ತಿ ಅಮನದೀಪ್ ಕೌರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಉದ್ಘಾಟನೆ: ಶುಕ್ರವಾರ ಸಂಜೆ 6.30ಕ್ಕೆ ಉದ್ಘಾಟನೆ ಕಾರ್ಯಕ್ರಮ ಆರಂಭವಾಗಲಿದೆ. ಬಾಲಿವುಡ್ ತಾರೆಯರ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಬಿಸಿಸಿಐ ಮತ್ತು  ಐಪಿಎಲ್ ಸಮಿತಿಯ ಪದಾಧಿಕಾರಿಗಳು ಹಾಜರಿರುವರು.

ತಂಡಗಳು: ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಬ್ನಿಮ್ ಇಸ್ಮಾಯಿಲ್, ಹಯಲಿ ಮ್ಯಾಥ್ಯೂಸ್, ಪೂಜಾ ವಸ್ತ್ರಕರ್, ಐಸಿ ವಾಂಗ್, ಪ್ರಿಯಾಂಕಾ ಬಾಲಾ, ಫಾತಿಮಾ ಜಾಫರ್, ಹುಮೈರಾ ಖಾಜಿ, ಅಮನದೀಪ್ ಕೌರ್, ಶೋಲಿ ಟ್ರಯಾನ್, ನತಾಲೀ ಶೀವರ್ ಬ್ರಂಟ್, ಅಮೆಲಿಯಾ ಕೆರ್, ಕೀರ್ತನಾ ಬಾಲಕೃಷ್ಣ, ಯಷ್ಟಿಕಾ ಭಾಟಿಯಾ, ಅಮನ್ಜೋತ್ ಕೌರ್, ಸಂಜೀವನ್ ಸಜನಾ, ಜಿಂತಿಮಣಿ ಕಲಿಟಾ, ಸೈಕಾ ಇಶಾಕಿ. ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಪೂನಂ ಯಾದವ್, ಮರಿಜಾನೆ ಕಾಪ್, ಲಾರಾ ಹ್ಯಾರಿಸ್, ರಾಧಾ ಯಾದವ್, ತಾನಿಯಾ ಭಾಟಿಯಾ, ಮಿನು ಮಣಿ, ಅಶ್ವಿನಿ ಕುಮಾರಿ, ಅಲೈಸ್ ಕ್ಯಾಪ್ಸೆ, ಜೆಸ್ ಜಾನ್ಸೆನ್, ಸ್ನೇಹಾ ದೀಪ್ತಿ, ಶಿಖಾ ಪಾಂಡೆ, ಅನಾಬೆಲ್ ಸದರ್ಲೆಂಡ್, ಜಿಮೈಮಾ ರಾಡ್ರಿಗಸ್, ಅರುಂಧತಿ ರೆಡ್ಡಿ, ಶಫಾಲಿ ವರ್ಮಾ, ಅಪರ್ಣಾ ಮಂಡಲ್,  ತಿತಾಸ್ ಸಾಧು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ

ಡೆಲ್ಲಿ ತಂಡದೊಂದಿಗೆ ಡಿಪಿ ವರ್ಲ್ಡ್‌ ಪಾಲುದಾರಿಕೆ

ಡಿಪಿ ವರ್ಲ್ಡ್ ಸಂಸ್ಥೆಯು ದೆಹಲಿ ಕ್ಯಾಪಿಟಲ್ ತಂಡದೊಂದಿಗೆ ಟೈಟಲ್ ಪಾಲುದಾರಿಕೆ ಮಾಡಿಕೊಂಡಿವೆ.  ಸ್ಮಾರ್ಟ್ ಎಂಡ್-ಟು-ಎಂಡ್ ಸಪ್ಲೈ ಚೇನ್ ಪರಿಹಾರಗಳನ್ನು ಪೂರೈಕೆ ಮಾಡುವಲ್ಲಿ ಡಿಪಿ ವರ್ಲ್ಡ್ ಮುಂಚೂಣಿಯಲ್ಲಿದೆ. 

ಈ ಪಾಲುದಾರಿಕೆಯ ಭಾಗವಾಗಿ ದೆಹಲಿ ಕ್ಯಾಪಿಟಲ್ಸ್ ನ ಅಧಿಕೃತ ಮ್ಯಾಚ್ ಜೆರ್ಸಿ ಮತ್ತು ಟ್ರೈನಿಂಗ್ ಜೆರ್ಸಿಯಲ್ಲಿ ಡಿಪಿ ವರ್ಲ್ಡ್ ನ ಲೋಗೋ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ. ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಜೆರ್ಸಿ ಬಿಡುಗಡೆ ಮಾಡಲಾಯಿತು.

ದೆಹಲಿ ಕ್ಯಾಪಿಟಲ್ಸ್‌ನ ಸಿಇಒ ಸುಖವಿಂದರ್ ಸಿಂಗ್, ‘ಮಹಿಳಾ ತಂಡಕ್ಕೆ ಡಿಪಿ ವರ್ಲ್ಡ್ ಟೈಟಲ್ ಪಾಲುದಾರ ಸಂಸ್ಥೆಯಾಗುತ್ತಿರುವುದಕ್ಕೆ ನಮಗೆ  ಸಂತಸವಾಗುತ್ತಿದೆ. ಮಹಿಳೆಯರನ್ನು ಕ್ರೀಡೆಯ ಕಡೆಗೆ ಆಸಕ್ತಿ ತೋರುವಂತೆ ಮಾಡುವ ಬದ್ಧತೆಯನ್ನು ಹೊಂದಿರುವ ಡಿಪಿ ವರ್ಲ್ಡ್ ನ ದೀರ್ಘಾವಧಿಯ ಬದ್ಧತೆಯು ಶ್ಲಾಘನೀಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.