ಕೋಲ್ಕತ್ತ: ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡದ ಕುರಿತು ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅಸಮಾಧಾನಗೊಂಡಿದ್ದಾರೆ.
ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇನ್ನು ಮುಂದೆ ಭಾರತ ತಂಡದಲ್ಲಿ ಸ್ಥಾನ ಸಿಗುವುದಿಲ್ಲ. ನೀವು ನಿವೃತ್ತಿಯಾಗುವ ಬಗ್ಗೆ ಯೋಚಿಸುವುದು ಒಳಿತು ಎಂದು ದ್ರಾವಿಡ್ ಸಲಹೆ ನೀಡಿದ್ದರು. ಈಚೆಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ತಾವು ಅಧಿಕಾರದಲ್ಲಿರುವವರೆಗೂ ತಂಡದಲ್ಲಿ ನಿನ್ನ ಸ್ಥಾನ ಅಬಾಧಿತ ಎಂದು ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ’ ಎಂದು ಬಂಗಾಳದ ಸಹಾ ಹೇಳಿದ್ದಾರೆ.
‘ಹೋದ ನವೆಂಬರ್‌ನಲ್ಲಿ ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಎದುರು ನೋವು ನಿವಾರಕ ಮಾತ್ರ ನುಂಗಿ ಆಡಿದ್ದೆ. ಅಜೇಯ 61 ರನ್ ಗಳಿಸಿದ್ದೆ. ಆ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಅಭಿನಂದಿಸಿದ್ದ ದಾದಿ(ಸೌರವ್ ಗಂಗೂಲಿ) ತಂಡದಲ್ಲಿ ಸ್ಥಾನ ಇರುವ ಬಗ್ಗೆ ಭರವಸೆ ನೀಡಿದ್ದರು’ ಎಂದು ಸಹಾ ಬಹಿರಂಗಪಡಿಸಿದ್ದಾರೆ.
‘ಅಲ್ಲದೇ ತಾವು ಮಂಡಳಿ ಅಧ್ಯಕ್ಷರಾಗಿರುವವರೆಗೂ ನೀನು ಯಾವುದೇ ವಿಷಯಕ್ಕೂ ಚಿಂತಿಸಬೇಡ ಎಂದಿದ್ದರು. ಅಧ್ಯಕ್ಷರ ಇಂತಹ ಬೆಂಬಲದಿಂದ ಆತ್ಮವಿಶ್ವಾಸ ಇಮ್ಮಡಿಗೊಂಡಿತ್ತು. ಆದರೆ, ಇಷ್ಟು ಬೇಗ ಎಲ್ಲವೂ ಬದಲಾಗಿದ್ದು ಹೇಗೆಂದು ಅಚ್ಚರಿಯಾಗುತ್ತಿದೆ’ ಎಂದು ಸಹಾ ಹೇಳಿದ್ದಾರೆ.
37 ವರ್ಷದ ಸಹಾ 40 ಟೆಸ್ಟ್ ಆಡಿದ್ದಾರೆ. 1353 ರನ್ ಗಳಿಸಿದ್ದಾರೆ. ಅದರಲ್ಲಿ ಮೂರು ಶತಕ ಮತ್ತು ಆರು ಅರ್ಧಶತಕಗಳು ಇವೆ. ಒಂಬತ್ತು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿಯೂ 133 ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.