ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಪಂದ್ಯ ಗೆದ್ದ ಕ್ಷಣ ತಂಡದೆಲ್ಲ ಆಟಗಾರರು ಕುಣಿದು ಕುಪ್ಪಳಿಸುತ್ತಿದ್ದರೂ ಡಗೌಟ್‌ನಲ್ಲಿದ್ದ ಜೇಮ್ಸ್ ನಿಶಾಮ್ ಮಾತ್ರ ತಾವು ಕುಳಿತಿದ್ದ ಕುರ್ಚಿಯಿಂದ ಕದಲಲಿಲ್ಲ.
ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದ್ದ ತಮ್ಮ ಈ ನಡೆ ಕುರಿತು ಟ್ವೀಟ್ ಮಾಡಿದ್ದ ನಿಶಾಮ್, 'ಕರ್ತವ್ಯ ಮುಗಿಯಿತೇ? ನನಗೆ ಹಾಗೇ ಅನಿಸುತ್ತಿಲ್ಲ' ಎಂದು ಹೇಳಿದ್ದರು.
ಈಗ ಮತ್ತಷ್ಟು ವಿವರಣೆ ನೀಡಿರುವ ನಿಶಾಮ್, 'ಇದು ಸೆಮಿಫೈನಲ್ ಪಂದ್ಯ ಗೆದ್ದು ಸಂಭ್ರಮಿಸಲು ಯೋಗ್ಯವಾದ ಸನ್ನಿವೇಶ ಎಂದು ನಾನು ಭಾವಿಸುತ್ತೇನೆ. ಆದರೆ ಸೆಮಿಫೈನಲ್ ಪಂದ್ಯ ಗೆಲ್ಲುವುದಕ್ಕಾಗಿ ಮಾತ್ರ ಇಷ್ಟು ದೂರ ಬಂದಿಲ್ಲ' ಎಂದು ತಿಳಿಸಿದ್ದಾರೆ.
ಅಲ್ಲದೆ ಫೈನಲ್ ಪಂದ್ಯ ಗೆಲ್ಲುವ ಮಹತ್ವವನ್ನು ಪ್ರತಿಪಾದಿಸಿದ್ದಾರೆ. 'ವೈಯಕ್ತಿಕವಾಗಿ ನಾನು ಹಾಗೂ ನಮ್ಮ ತಂಡ ಮುಂದಿನದರ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಉಳಿದಿದ್ದು, ಆ ರೇಖೆ ದಾಟಲು ಸಾಧ್ಯವಾದರೆ ಮತ್ತಷ್ಟು ಭಾವನೆಗಳು ಹೊರಹೊಮ್ಮಬಹುದು' ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ಕುರಿತು ಮಾತನಾಡಿರುವ ನಿಶಾಮ್, 'ನೋಡಿ, ನಾವು ಅನುಭವವನ್ನು ಸಂಪಾದಿಸಿದ್ದೇವೆ. ಕಳೆದ ಐದು-ಆರು ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದೇವೆ. 'ರಿಸೆಟ್ ಬಟನ್' ಅನ್ನು ಹೇಗೆ ಒತ್ತಬೇಕು ಎಂದು ನಮಗೆ ತಿಳಿದಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.