ಕರಾಚಿ: ಅಮೆರಿಕನ್ ಡಾಲರ್ ನೋಟಿನಲ್ಲಿ ಹಣೆ ಒರೆಸಿಕೊಳ್ಳುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಾಕಿಸ್ತಾನದ ಯುವ ಬ್ಯಾಟರ್ ಆಜಂ ಖಾನ್ ವಿವಾದಕ್ಕೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಹಾಗೂ ಇನ್ನಿತರ ಆಟಗಾರರ ಜೊತೆ ಇರುವಾಗ ಹೀಗೆ ವರ್ತಿಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವಾಗ ಆಜಂ ಖಾನ್ ಸಂವೇದನಾರಹಿತವಾಗಿ ವರ್ತಿಸಿದ್ದು ಕ್ರಿಕೆಟ್ ಪ್ರಿಯರ ಟೀಕೆಗೆ ಗುರಿಯಾಗಿದೆ.
ವಿಡಿಯೊದಲ್ಲಿ ಆಜಂ ಖಾನ್ ಅವರನ್ನು ಮಾತ್ರ ಕಾಣಬಹುದಾಗಿದೆ.
ಏನಾಗುತ್ತಿದೆ ಎಂದು ಬಾಬರ್ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಆಜಂ ಭಾರಿ ಸೆಖೆ ಇದೆ ಎಂದು ಹೇಳುತ್ತಾ ನೋಟಿನಿಂದ ಹಣೆ ಒರೆಸಿಕೊಳ್ಳುತ್ತಾರೆ. ಉಳಿದವರು ಈ ವೇಳೆ ನಗಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ 8 ಸೆಕೆಂಡ್‌ನ ವಿಡಿಯೊದಲ್ಲಿ ಇವಿಷ್ಟು ದಾಖಲಾಗಿವೆ.
‘ಪಾಕಿಸ್ತಾನದ ಕ್ರೀಡಾ ಇತಿಹಾಸದಲ್ಲಿ ಅಪರೂಪದ ಕೆಲವರನ್ನು ಹೊರತುಪಡಿಸಿ, ಯಾರಿಗೂ ಯಾವುದೇ ರೀತಿಯ ವರ್ಚಸ್ಸು, ಪ್ರಭಾವ ಇಲ್ಲ. ಈ ಚಿಕ್ಕ ಮಗುವಿಗೆ ಯಾರೂ ಮಾದರಿಯಿಲ್ಲ. ಹತಾಶೆಯಾಗಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಅಂತರರಾಷ್ಟ್ರೀಯ ವೇದಿಕೆಗೆ ಕಳುಹಿಸುವ ಮುನ್ನ ಸಾಮಾನ್ಯ ವಿವೇಚನೆ ಪಡೆಯಲು ಶಾಲೆಗೆ ಕಳುಹಿಸಿ ಎಂದು ಇನ್ನೊಬ್ಬ ಬಳಕೆದಾರರು ಕೋಪೋದ್ರಿಕ್ತರಾಗಿ ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.