ಅಹಮದಾಬಾದ್: ರಣಜಿ ಟ್ರೋಫಿ ವಿಜೇತ, ಸೌರಾಷ್ಟ್ರದ ಯುವ ಕ್ರಿಕೆಟಿಗ ಅವಿ ಬಾರೋಟ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 29 ವರ್ಷ ವಯಸ್ಸಾಗಿತ್ತು.
19 ವರ್ಷದವರೊಳಗಿನ ಭಾರತ ತಂಡದ ಮಾಜಿ ನಾಯಕರೂ ಆಗಿರುವ ಬಾರೋಟ್, 2019-20ರ ಆವೃತ್ತಿಯಲ್ಲಿ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡದ ಸದಸ್ಯರಾಗಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಹರಿಯಾಣ ಹಾಗೂ ಗುಜರಾತ್ ತಂಡಗಳನ್ನು ಪ್ರತಿನಿಧಿಸಿರುವ ಅವಿ ಬಾರೋಟ್, ಅಹಮದಾಬಾದ್‌ನಲ್ಲಿ ಸ್ವಗೃಹದಲ್ಲಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅಂಬುಲೆನ್ಸ್‌ನಲ್ಲಿ ಕೊನೆಯುಸಿರೆಳೆದರು.
ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬಾರೋಟ್, ಪತ್ನಿ ಹಾಗೂ ತಾಯಿಯನ್ನು ಅಗಲಿದ್ದಾರೆ. ಅವರ ಪತ್ನಿ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಬಾರೋಟ್ ಪ್ರಥಮ ದರ್ಜೆಯಲ್ಲಿ 38 , ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 38 ಮತ್ತು ದೇಶೀಯ ಟ್ವೆಂಟಿ-20 ಟೂರ್ನಿಯಲ್ಲಿ 20 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಅನುಕ್ರಮವಾಗಿ 1,547, 1030 ಮತ್ತು 717 ರನ್ ಗಳಿಸಿದ್ದಾರೆ.
ರಣಜಿ ಟ್ರೋಫಿ ಫೈನಲ್‌ನಲ್ಲಿ ಬಾರೋಟ್ ಅರ್ಧಶತಕ ಗಳಿಸಿದ್ದರು. ಈ ಮೂಲಕ ಸೌರಾಷ್ಟ್ರ ಗೆಲುವಿನಲ್ಲಿ ಕೊಡುಗೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.