ನವದೆಹಲಿ: ‘ಪಾಕಿಸ್ತಾನದ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಅವರಿಗೆ ಕೆಲವು ಸಲಹೆಗಳನ್ನು ನೀಡಲು ಯತ್ನಿಸಿದ ವೇಳೆ ನನ್ನ ಗಂಟಲಿಗೇ ಚಾಕು ಹಿಡಿದಿದ್ದರು’ ಎಂದು ಆ ತಂಡದಬ್ಯಾಟಿಂಗ್ ಕೋಚ್ ಆಗಿದ್ದ ಗ್ರ್ಯಾಂಟ್ ಫ್ಲವರ್ ಆರೋಪಿಸಿದ್ದಾರೆ.
ಪಾಕ್ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಪ್ರಸಂಗವನ್ನು ಗ್ರ್ಯಾಂಟ್ ನೆನಪಿಸಿಕೊಂಡಿದ್ದಾರೆ. ಫ್ಲವರ್ ಜಿಂಬಾಬ್ವೆಯ ಮಾಜಿ ಅಂತರರಾಷ್ಟ್ರೀಯ ಆಟಗಾರ ಕೂಡ. 49 ವರ್ಷದ ಗ್ರ್ಯಾಂಟ್, 2014ರಿಂದ 2019ರವರೆಗೆ ಪಾಕಿಸ್ತಾನ ತಂಡದ ತರಬೇತುದಾರರಾಗಿದ್ದರು. ಸದ್ಯ ಅವರು ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
‘ಯೂನಿಸ್ ಖಾನ್ ಅವರ ನಡವಳಿಕೆಯನ್ನು ಅರಿತುಕೊಳ್ಳುವುದು ಕಷ್ಟ. ಅದು ಬ್ರಿಸ್ಬೇನ್ ಟೆಸ್ಟ್ ಪಂದ್ಯದ ವೇಳೆ ನಡೆದ ಪ್ರಸಂಗ. ನಾನು ಆತನಿಗೆ ಬ್ಯಾಟಿಂಗ್ ಕುರಿತು ಕೆಲವೊಂದಿಷ್ಟು ಸಲಹೆಗಳನ್ನು ನೀಡಲು ಯತ್ನಿಸಿದೆ. ಆದರೆ ಅವರು ಸಲಹೆಗಳನ್ನು ನಯವಾಗಿ ಸ್ವೀಕರಿಸದೆ ನನ್ನ ಗಂಟಲಿಗೆ ಚಾಕು ಹಿಡಿದಿದ್ದರು. ಆಗ ಅಲ್ಲಿಯೇ ಇದ್ದ ಮಿಕಿ ಅರ್ಥರ್ ಮಧ್ಯ ಪ್ರವೇಶಿಸಬೇಕಾಯಿತು’ ಎಂದು ತಮ್ಮ ಸಹೋದರ ಆ್ಯಂಡಿ ಫ್ಲವರ್ ಹಾಗೂ ಕಾರ್ಯಕ್ರಮ ಆಯೋಜಕ ನೀಲ್ ಮ್ಯಾಂಥೋರ್ಪ್ ಅವರೊಂದಿಗೆ ನಡೆಸಿದ ‘ಫಾಲೊಯಿಂಗ್ ಆನ್ ಕ್ರಿಕೆಟ್ ಫಾಡ್‌ಕಾಸ್ಟ್’ನಲ್ಲಿ ಗ್ರ್ಯಾಂಟ್ ವಿವರಿಸಿದ್ದಾರೆ.
‘ಕುತೂಹಲದ ಸಂಗತಿಯಾದರೂ ಇದು ತರಬೇತಿಯ ಒಂದು ಭಾಗ. ಇಂತಹ ಘಟನೆ ಕ್ರಿಕೆಟ್ ಪ್ರವಾಸದ ವೇಳೆ ತಕ್ಕುದಲ್ಲ. ಆದರೆ ನಾನು ಆ ಪ್ರಸಂಗವನ್ನು ಆನಂದಿಸಿದೆ. ನಾನು ತಿಳಿದುಕೊಳ್ಳುವುದು ಇನ್ನೂ ಸಾಕಷ್ಟಿದೆ’ ಎಂದು ಗ್ರ್ಯಾಂಟ್ ಹೇಳಿದ್ದಾರೆ.
ಯೂನಿಸ್ ಖಾನ್ ಅವರು ಇತ್ತೀಚೆಗೆ ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ತಂಡಕ್ಕೆ ತರಬೇತಿ ನೀಡಲಿದ್ದಾರೆ. ರಾಷ್ಟ್ರೀಯ ತಂಡದ ಪರ 118 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅವರು 52.05ರ ಸರಾಸರಿಯಲ್ಲಿ 10,099 ರನ್ ಗಳಿಸಿದ್ದಾರೆ.
ಗ್ರ್ಯಾಂಟ್ ಅವರ ಆರೋಪ ಕುರಿತಂತೆ ಯೂನಿಸ್ ಪ್ರತಿಕ್ರಿಯಿಸಿಲ್ಲ.
2016ರಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಮೊದಲ ಟೆಸ್ಟ್ ಪಂದ್ಯದ ವೇಳೆ ಗ್ರ್ಯಾಂಟ್ ಅವರು ಹೇಳಿದ ಪ್ರಸಂಗ ನಡೆದಿರುವ ಸಾಧ್ಯತೆಯಿದೆ. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಯೂನಿಸ್ ಖಾನ್, ಎರಡನೇ ಇನಿಂಗ್ಸ್‌ನಲ್ಲಿ 65 ರನ್ ಕಲೆಹಾಕಿದ್ದರು.
ಅದು ತಮಾಷೆಯ ಪ್ರಸಂಗ: ಗ್ರ್ಯಾಂಟ್ ಫ್ಲವರ್ ಹೇಳಿರುವ ಘಟನೆಯ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ಪ್ರತಿಕ್ರಿಯಿಸಿದ್ದು, ‘ಅದು ನಿಜವಾದ ಬೆದರಿಕೆಯಾಗಿರಲಿಲ್ಲ. ತಮಾಷೆ ಹಾಗೂ ಸಲುಗೆಯ ನೆಲೆಯಲ್ಲಿ ಯೂನಿಸ್ ಅವರು ಚಾಕು ತೋರಿಸಿದ್ದರು’ ಎಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.