ADVERTISEMENT

19 ವರ್ಷದೊಳಗಿನವರ ಟೆಸ್ಟ್‌ | ಭಾರತಕ್ಕೆ ಇನಿಂಗ್ಸ್ ಜಯ; ಮಿಂಚಿದ ಅನ್ಮೋಲ್, ಇನಾನ್

ಪಿಟಿಐ
Published 9 ಅಕ್ಟೋಬರ್ 2024, 13:14 IST
Last Updated 9 ಅಕ್ಟೋಬರ್ 2024, 13:14 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಚೆನ್ನೈ: ಪದಾರ್ಪಣೆ ಪಂದ್ಯವಾಡಿದ ಆಫ್‌ ಸ್ಪಿನ್ನರ್ ಅನ್ಮೋಲ್‌ಜೀತ್ ಸಿಂಗ್ ಮತ್ತು ಲೆಗ್‌ ಸ್ಪಿನ್ನರ್‌ ಮೊಹಮದ್ ಇನಾನ್ ಅವರು 19 ವರ್ಷದೊಳಗಿನವರ ಕ್ರಿಕೆಟ್‌ ‘ಟೆಸ್ಟ್’ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ 20 ವಿಕೆಟ್‌ಗಳಲ್ಲಿ 16 ವಿಕೆಟ್‌ಗಳನ್ನು ತಮ್ಮೊಳಗೆ ಹಂಚಿಕೊಂಡರು. ಇವರಿಬ್ಬರ ಅಮೋಘ ಬೌಲಿಂಗ್‌ನಿಂದಾಗಿ ಭಾರತ ಯುವ ತಂಡ ಇನಿಂಗ್ಸ್ ಮತ್ತು 120 ರನ್‌ಗಳಿಂದ ಸುಲಭವಾಗಿ ಜಯಗಳಿಸಿ ಸರಣಿಯನ್ನು 2–0 ಯಿಂದ ಕ್ಲೀನ್‌ಸ್ವೀಪ್ ಮಾಡಿಕೊಂಡಿತು.

ಭಾರತದ 492 ರನ್‌ಗಳ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ 3 ವಿಕೆಟ್‌ಗೆ 142 ರನ್‌ಗಳೊಡನೆ ಮೂರನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಒಂದೇ ದಿನ 17 ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಪ್ರವಾಸಿ ತಂಡ ಮೊದಲ ಸರದಿಯಲ್ಲಿ 277 ರನ್‌ಗಳಿಗೆ ಆಟ ಮುಗಿಸಿತು. ನಾಯಕ ಒಲಿವರ್ ಪೀಕೆ (117, 143 ಎಸೆತ) ಶತಕ ಬಾರಿಸಿದರಲ್ಲದೇ, ವಿಕೆಟ್‌ ಕೀಪರ್ ಅಲೆಕ್ಸ್ ಲೀ ಯಂಗ್ (66) ಜೊತೆ ನಾಲ್ಕನೇ ವಿಕೆಟ್‌ಗೆ 166 ರನ್ ಸೇರಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂಥ ಆಟ ಬರಲಿಲ್ಲ. ಕೊನೆಯ ಆರು ವಿಕೆಟ್‌ಗಳು 59 ರನ್‌ಗಳಿಗೆ ಉರುಳಿದವು.

ಕೇರಳದ ಬೌಲರ್ ಇನಾನ್ 22.2 ಓವರುಗಳಲ್ಲಿ 60 ರನ್ನಿಗೆ 4 ವಿಕೆಟ್ ಪಡೆದರು. ಲುಧಿಯಾನದ ಅನ್ಮೋಲ್‌ಜೀತ್‌ 72 ರನ್ನಿಗೆ 4 ವಿಕೆಟ್‌ ಉರುಳಿಸಿದರು.  ಅನ್ಮೋಲ್, ಪಂದ್ಯದ ಆಟಗಾರ ಗೌರವವನ್ನೂ ಪಡೆದರು.

ನಾಲ್ಕು ದಿನಗಳ ಪಂದ್ಯದಲ್ಲಿ ತಂಡವೊಂದು 150ಕ್ಕಿಂತ ಹೆಚ್ಚು ಮುನ್ನಡೆ ಪಡೆದರೆ ಫಾಲೊಆನ್‌ ಹೇರಲು ಅವಕಾಶವಿದೆ. 215 ರನ್ ಮುನ್ನಡೆ ಪಡೆದ ಭಾರತ ಫಾಲೊಆನ್ ಹೇರಿತು. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 31.3 ಓವರುಗಳಲ್ಲಿ 95 ರನ್ನಿಗೆ ಕುಸಿಯಿತು. ಎಂಟು ಮಂದಿ ಬ್ಯಾಟರ್‌ಗಳು ಎರಡಂಕಿ ಮೊತ್ತ ತಲಪಲೂ ವಿಫಲರಾದರು.

ಹರಭಜನ್ ಸಿಂಗ್ ಅವರಿಂದ ಸ್ಪೂರ್ತಿ ಪಡೆದಿರುವ ಅನ್ಮೋಲ್‌ಜೀತ್ ವಿಜಯ್ ಮರ್ಚೆಂಟ್‌ ಟ್ರೋಫಿಯಲ್ಲಿ 65 ವಿಕೆಟ್‌ಗಳನ್ನು ಪಡೆದು ಗಮನಸೆಳೆದಿದ್ದರು. ಅವರು ಎರಡನೇ ಇನಿಂಗ್ಸ್‌ನಲ್ಲಿ 32 ರನ್ನಿಗೆ 5 ವಿಕೆಟ್ ಮತ್ತು ಒಟ್ಟಾರೆ 104 ರನ್ನಿಗೆ 9 ವಿಕೆಟ್ ಕಬಳಿಸಿದರು. ಇನಾನ್ 97 ರನ್ನಿಗೆ  ವಿಕೆಟ್ ಪಡೆದು ತಮ್ಮ ಅಸ್ತಿತ್ವವನ್ನೂ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.