ಮುಂಬೈ:ಕ್ರಿಕೆಟ್ ಅಂಗಣದಲ್ಲಿ ಮತ್ತು ಬದುಕಿನಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ದಿಟ್ಟವಾಗಿ ಆಡಿದ ಹಾಗೂ ಬದುಕಿದ ‘ಧೀರ’, ಸಿಕ್ಸರ್‌ಗಳ ಸರದಾರ ಯುವರಾಜ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ವಿದಾಯ ಹೇಳಿದರು.
ಕ್ಯಾನ್ಸರ್ ಮೆಟ್ಟಿ ನಿಂತು ಅಚ್ಚರಿ ಮೂಡಿಸಿದ ಮತ್ತು ಆರು ಎಸೆತಳಲ್ಲಿ ಆರು ಸಿಕ್ಸರ್ ಸಿಡಿಸಿ ಕ್ರೀಡಾಲೋಕದ ಗಮನ ಸೆಳೆದ ಚಂಡೀಗಢದ ಯುವರಾಜ್ ಸಿಂಗ್ ಅವರಿಗೆ ಈಗ 37ರ ಹರಯ. ಭಾರತ ತಂಡ 2011ರಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡದ ಬೆನ್ನೆಲುಬು ಆಗಿದ್ದರು.
ಇದನ್ನೂ ಓದಿ...‘ವಿಶ್ವ’ ಗೆದ್ದ ತುಂಟ ಹುಡುಗ.. ಅಮ್ಮನ ಬಣ್ಣನೆ
17 ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಸಾಧನೆ ಮಾಡಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಲಯ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.
‘ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ಆದ್ದರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಭಾರತಕ್ಕಾಗಿ 400ಕ್ಕೂ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾದದ್ದು ನನ್ನ ಅದೃಷ್ಟವೆಂದೇ ತಿಳಿದಿದ್ದೇನೆ’ ಎಂದು ಅವರು ವಿದಾಯ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ನುಡಿದರು.
‘ನನ್ನ ಪಾಲಿಗೆ ಕ್ರಿಕೆಟ್ ಎಂದರೆ ಏನು ಎಂಬುದನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ಈ ಕ್ರೀಡೆಯ ಜೊತೆ ನನ್ನದು ಭಾವನಾತ್ಮಕ ಸಂಬಂಧ. ಹೋರಾಡುವುದನ್ನು, ಮುಂದಡಿಯಿಡುವುದನ್ನು ಕ್ರಿಕೆಟ್ ಕಲಿಸಿದೆ’ ಎಂದು ಅವರು ಹೇಳಿದರು.
‘ಪಾಕಿಸ್ತಾನ ಎದುರು ಗಳಿಸಿದ ಚೊಚ್ಚಲ ಟೆಸ್ಟ್ ಶತಕ, 2011ರ ವಿಶ್ವಕಪ್‌ನಲ್ಲಿ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿ, 2007ರ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳಿಸಿದ್ದು ವೃತ್ತಿ ಬದುಕಿನ ಮರೆಯಲಾರದ ಕ್ಷಣಗಳು’ ಎಂದು ಯುವಿ ಹೇಳಿದರು.
2011ರ ವಿಶ್ವಕಪ್ ಟೂರ್ನಿಯ ನಂತರ ಯುವರಾಜ್ ಸಿಂಗ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಮಾತನಾಡಿದ ಅವರು ‘ಕ್ಯಾನ್ಸರ್ ನನ್ನನ್ನು ಸೋಲಿಸಲು ಬಿಡುವುದಿಲ್ಲ ಎಂದು ಅಂದೇ ಪಣ ತೊಟ್ಟಿದ್ದೆ. ಅದನ್ನು ಸಾಧಿಸಿಯೂ ಬಿಟ್ಟೆ’ ಎಂದರು.
ಪ್ರಮುಖ ಅಂಶಗಳು
* ಚೊಚ್ಚಲ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಎದುರಿನ ಪಂದ್ಯದ ಕೊನೆಯ ಓವರ್ ಹಾಕಿದ ಸ್ಟುವರ್ಟ್ ಬ್ರಾಡ್ ಅವರ ಎಲ್ಲ ಎಸೆತಗಳನ್ನೂ ಯುವಿ ಸಿಕ್ಸರ್‌ಗೆ ಎತ್ತಿದ್ದರು. ಪಂದ್ಯದಲ್ಲಿ 12 ಎಸೆತಗಳಲ್ಲಿ 50 ರನ್ ಗಳಿಸಿದ ಅವರು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ದಾಖಲೆ ಬರೆದರು.
* ಒಂದೇ ವಿಶ್ವಕಪ್ ಟೂರ್ನಿಯಲ್ಲಿ (2011) 300 ರನ್ ಗಳಿಸಿದ ಮತ್ತು 15 ವಿಕೆಟ್ ಗಳಿಸಿದ ಮೊದಲ ಆಲ್‌ರೌಂಡ್ ಆಟಗಾರ. ಟೂರ್ನಿಯಲ್ಲಿ ಅವರು 362 ರನ್ ಮತ್ತು 15 ವಿಕೆಟ್ ಗಳಿಸಿದ್ದಾರೆ. ನಾಲ್ಕು ಪಂದ್ಯಶ್ರೇಷ್ಠ ಪ್ರಶಸ್ತಿಗಳು ಅವರ ಪಾಲಾಗಿದ್ದವು.
* ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ನೆಚ್ಚಿನ ಕ್ಯಾಪ್ಟನ್‌ಗಳು ಮತ್ತು ಮುತ್ತಯ್ಯ ಮುರಳಿಧರನ್ ಹಾಗೂ ಗ್ಲೆನ್ ಮೆಗ್ರಾ ಸವಾಲೆಸೆದ ಬೌಲರ್‌ಗಳು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
Yuvraj Singh announces retirement from International cricket pic.twitter.com/RQbumXn4Pa
ವಿದಾಯ ಪಂದ್ಯ ಆಡಲಾಗಲಿಲ್ಲ...
ಮುಂಬೈ (ಪಿಟಿಐ): ಯೋಯೊ ಟೆಸ್ಟ್‌ನ ಫಲಿತಾಂಶ ಸಕಾರಾತ್ಮಕವಲ್ಲದಿದ್ದರೂ ವಿದಾಯ ಪಂದ್ಯ ಆಡಲು ಅವಕಾಶ ನೀಡುವುದಾಗಿ ಬಿಸಿಸಿಐ ಹೇಳಿತ್ತು. ಆದರೆ ಕೊನೆಗೂ ಆ ಗಳಿಗೆ ಕೂಡಿಬರಲಿಲ್ಲ ಎಂದು ಯುವರಾಜ್ ಸಿಂಗ್ ಪತ್ರಿಕಾಗೋಷ್ಠಿ ಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ವಿದಾಯ ಪಂದ್ಯ ಆಡಲೇಬೇಕು ಎಂಬ ಆಸೆ ಇರಲಿಲ್ಲ. ಖ್ಯಾತ ಕ್ರಿಕೆಟಿಗರಾದ ವಿ.ವಿ.ಎಸ್. ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರಂಥವರಿಗೇ ಈ ಅವಕಾಶ ಸಿಗಲಿಲ್ಲ ಎಂಬುದನ್ನು ಮರೆಯಬಾರದು’ ಎಂದು ಅವರು ಹೇಳಿದರು.
‘ವಿದಾಯ ಪಂದ್ಯ ಬೇಡ ಎಂದು ಹೇಳಿದ್ದೆ. ಯೋಯೊ ಟೆಸ್ಟ್‌ನಲ್ಲಿ ಸಾಮರ್ಥ್ಯ ತೋರಲು ವಿಫಲನಾದರೆ ನೇರ ಮನೆಗೆ ತೆರಳುವೆ ಎಂದಿದ್ದೆ. ಆದರೆ ಯೋಯೊ ಟೆಸ್ಟ್ ಪಾಸ್ ಆದೆ. ಮಿಕ್ಕಿದ್ದೆಲ್ಲ ನಿಮಗೆ ಗೊತ್ತೇ ಇದೆಯಲ್ಲ...’ ಎಂದು ಹೇಳಿದರು.
ಐಪಿಎಲ್‌ಗೂ ಬೈ
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಾತ್ರವಲ್ಲ, ಐಪಿಎಲ್‌ಗೂ ವಿದಾಯ ಹೇಳಿರುವುದಾಗಿ ಪ್ರಕಟಿಸಿದ ಯುವರಾಜ್ ವಿದೇಶಗಳಲ್ಲಿ ನಡೆಯುವ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವುದಾಗಿ ವಿವರಿಸಿದರು. ಕಳೆದ ಬಾರಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.
‘ಐಪಿಎಲ್‌ಗೆ ನಾನು ಲಭ್ಯನಿಲ್ಲ, ಬಿಸಿಸಿಐ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಇನ್ನು ಭಾರತದಿಂದ ಹೊರಗಷ್ಟೇ ಕ್ರಿಕೆಟ್ ಆಡುತ್ತೇನೆ’ ಎಂದರು. ಐಪಿಎಲ್‌ನಲ್ಲಿ ಐದು ತಂಡಗಳ ಪರ ಆಡಿದ್ದಾರೆ. ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಪುಣೆ ವಾರಿಯರ್ಸ್ ತಂಡಗಳ ನಾಯಕನೂ ಆಗಿದ್ದರು. ಆರ್‌ಸಿಬಿ ಮತ್ತು ಸನ್‌ರೈಸರ್ಸ್ ತಂಡಕ್ಕೂ ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.