ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಈ ಬಾರಿಯ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ರಾಯಭಾರಿಯನ್ನಾಗಿ ಘೋಷಿಸಲಾಗಿದೆ. ಈ ವಿಚಾರವನ್ನು ಭಾರತ ಅಂಧರ ಕ್ರಿಕೆಟ್ ಸಂಸ್ಥೆಯು (ಸಿಎಬಿಐ) ಖಚಿತಪಡಿಸಿದೆ.
ಭಾರತದಲ್ಲೇ ನಡೆಯುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನುಅಜಯ್ ಕುಮಾರ್ ರೆಡ್ಡಿ ಮುನ್ನಡೆಸಲಿದ್ದು, ವೆಂಕಟೇಶ್ವರ ರಾವ್ ದುನ್ನಾ ಉಪನಾಯಕರಾಗಿ ಆಡಲಿದ್ದಾರೆ. ವಿಶ್ವಕಪ್ ಟೂರ್ನಿಯು ಡಿಸೆಂಬರ್ 6 ರಿಂದ 17ರ ವರೆಗೆ ನಡೆಯಲಿದೆ.
ಇದು ಅಂಧರ ಕ್ರಿಕೆಟ್‌ನಲ್ಲಿ ಮೂರನೇ ಟಿ20 ವಿಶ್ವಕಪ್ ಟೂರ್ನಿಯಾಗಿದ್ದು, ಭಾರತ, ನೇಪಾಳ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ. ಮೊದಲ ಪಂದ್ಯವು ಫರಿದಾಬಾದ್‌ನಲ್ಲಿ ಡಿ.6 ರಂದು ನಡೆಯಲಿದ್ದು, ಹಾಲಿ ಚಾಂಪಿಯನ್ ಭಾರತ ಮತ್ತು ನೇಪಾಳ ಮುಖಾಮುಖಿಯಾಗಲಿವೆ.
ತಮ್ಮನ್ನು ರಾಯಭಾರಿಯನ್ನಾಗಿ ಘೋಷಿಸಿರುವ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್,'ನಾನು ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಪುಳಕಗೊಂಡಿದ್ದೇನೆ. ದೃಷ್ಟಿದೋಷವುಳ್ಳವರು ಕ್ರಿಕೆಟ್ ಬಗ್ಗೆ ಹೊಂದಿರುವ ಅತೀವ ಆಸಕ್ತಿ ಮತ್ತು ಸಮರ್ಪಣಾ ಭಾವವನ್ನು ಪ್ರಶಂಸಿಸುತ್ತೇನೆ. ಇದು ಬೇರೆಯದ್ದೇ ಜಗತ್ತು. ಆದರೆ ಕ್ರಿಕೆಟ್ ಪ್ರಪಂಚವೇ ಆಗಿದೆ. ಕ್ರಿಕೆಟ್‌ಗೆ ಯಾವುದೇ ಗಡಿ ಇಲ್ಲ. ಈ ಆಟವು ಹೇಗೆ ಹೋರಾಡಬೇಕು ಎಂಬುದನ್ನು ಕಲಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಎಲ್ಲರೂ ಬೆಂಬಲಿಸುವಂತೆ ಕೇಳಿಕೊಳ್ಳುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.