ನವದೆಹಲಿ: ಹೋದ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ದೇಶಿ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಪಂಜಾಬ್ ತಂಡದ 30 ಆಟಗಾರರ ಸಂಭವನೀಯರ ಪಟ್ಟಿಯಲ್ಲಿ ಯುವಿ ಸ್ಥಾನ ಪಡೆದಿದ್ದಾರೆ.
2011ರಲ್ಲಿ ಭಾರತ ತಂಡವು ವಿಶ್ವಕಪ್ ಜಯಿಸುವಲ್ಲಿ ಯುವರಾಜ್ ಸಿಂಗ್ ಆಲ್‌ರೌಂಡ್ ಆಟವು ಮಹತ್ವದ್ದಾಗಿತ್ತು. ಹೋದ ವರ್ಷವಷ್ಟೇ ಅವರು ಎಲ್ಲ ಮಾದರಿಗಳ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೋದ ಜೂನ್‌ನಲ್ಲಿ ಮತ್ತೆ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದ 39 ವರ್ಷದ ಯುವಿ, ಪಂಜಾಬ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಪುನೀತ್ ಬಾಲಿ ಅವರಿಗೆ ತಮ್ಮ ಇಂಗಿತ ತಿಳಿಸಿದ್ದರು.
ಎಡಗೈ ಆಲ್‌ರೌಂಡರ್ ಯುವಿ, 304 ಅಂತರರಾಷ್ಟ್ರೀಯ ಏಕದಿನ, 40 ಟೆಸ್ಟ್ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೊಹಾಲಿ ಕ್ರೀಡಾಂಗಣದಲ್ಲಿ ತಾವು ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ತಮ್ಮ ನಿವೃತ್ತಿಯ ನಂತರವೂ ಅವರು ಕೆನಡಾದಲ್ಲಿ ನಡದಿದ್ದ ಗ್ಲೋ ಬಲ್ ಟಿ20 ಲೀಗ್ ಟೂರ್ನಿಯಲ್ಲಿ ಆಡಿದ್ದರು. ಇದೀಗ ದೇಶಿ ಕ್ರಿಕೆಟ್‌ಗೆ ಮರಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅನುಮತಿಗಾಗಿ ಕಾಯುತ್ತಿದ್ದಾರೆ.
ಎಡಗೈ ಮಧ್ಯಮವೇಗಿ ಬರೀಂದರ್ ಸ್ರಾನ್ ಅವರನ್ನೂ ಸಂಭವನೀಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹೋದ ವರ್ಷ ಅವರನ್ನು ವಿಜಯ್ ಹಜಾರೆ ಟೂರ್ನಿಯಲ್ಲಿ ಪಂಜಾಬ್ ತಂಡದಿಂದ ಕೈಬಿಡಲಾಗಿತ್ತು.
ಈಚೆಗೆ ಐಪಿಎಲ್‌ನಲ್ಲಿ ಆಡಿದ್ದ ಅಭಿಷೇಕ್ ಶರ್ಮಾ, ಸಂದೀಪ್ ಶರ್ಮಾ, ಆರ್ಷದೀಪ್ ಸಿಂಗ್, ಗುರುಕೀರತ್ ಸಿಂಗ್, ಪ್ರಭಸಿಮ್ರನ್ ಸಿಂಗ್, ಸಿದ್ಧಾರ್ಥ್ ಕೌಲ್ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಜನವರಿ 10ರಂದು ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯನ್ನು ಆರಂಭಿಸಲು ಬಿಸಿಸಿಐ ಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.