ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿ ಆ್ಯಂಡರ್ಸನ್

ಪಿಟಿಐ
Published 28 ಫೆಬ್ರುವರಿ 2024, 14:32 IST
Last Updated 28 ಫೆಬ್ರುವರಿ 2024, 14:32 IST
ಜಿಮ್ಮಿ ಆ್ಯಂಡರ್ಸನ್
ಜಿಮ್ಮಿ ಆ್ಯಂಡರ್ಸನ್   

ನವದೆಹಲಿ: ಇಂಗ್ಲೆಂಡ್‌ ತಂಡದ ದಿಗ್ಗಜ ವೇಗದ ಬೌಲರ್ ಜಿಮ್ಮಿ ಆ್ಯಂಡರ್ಸನ್  ಅವರ ಸುದೀರ್ಘ ವೃತ್ತಿಜೀವನ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಎಲ್ಲ ಮಾದರಿಗಳಲ್ಲಿಯೂ ಸೇರಿ ಸಾವಿರ ವಿಕೆಟ್‌ ಗಳಿಕೆಯ ಸನಿಹದಲ್ಲಿದ್ದಾರೆ.

ಟೆಸ್ಟ್‌ ಮಾದರಿಯಲ್ಲಿ ಇನ್ನೆರಡು ವಿಕೆಟ್ ಗಳಿಸಿದ 700ರ ಗಡಿ ಮುಟ್ಟಲಿದ್ದಾರೆ.  ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ, ದಿವಂಗತ ಶೇನ್ ವಾರ್ನ್ ಅವರ ನಂತರ ಈ ಸಾಧನೆ ಮಾಡಿದ ಮೂರನೇ ಬೌಲರ್ ಆಗಲಿದ್ದಾರೆ.

41 ವರ್ಷದ ಆ್ಯಂಡರ್ಸನ್ ಈಗಲೂ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗದ ಮುಂದಾಳು. ತಾವು ಭಾರತದ ವೇಗಿ ಜಹೀರ್ ಖಾನ್ ಅವರಿಂದ ಬಹಳಷ್ಟು ಕಲಿತಿರುವುದಾಗಿ ನೆನಪಿಸಿಕೊಂಡಿದ್ದಾರೆ.

ADVERTISEMENT

‘ಜಹೀರ್ ಖಾನ್ ಅವರ ಬೌಲಿಂಗ್ ಅನ್ನು ಯಾವಾಗಲೂ ನೋಡುತ್ತಿದ್ದೆ. ಅದರಿಂದ ಬಹಳಷ್ಟು ಕಲಿತೆ. ಅವರು ರಿವರ್ಸ್ ಸ್ವಿಂಗ್ ಮಾಡುತ್ತಿದ್ದ ರೀತಿ, ಬೌಲಿಂಗ್ ಮಾಡಲು ರನ್‌ ಅಪ್‌ ತೆಗೆದುಕೊಂಡಾಗ ಚೆಂಡನ್ನು ಮುಚ್ಚಿ ಹಿಡಿಯುತ್ತಿದ್ದ ಕೌಶಲಗಳು  ನನ್ನನ್ನು ಬಹಳ ಆಕರ್ಷಿಸಿದ್ದವು. ಅಂತಹ ತಂತ್ರಗಳನ್ನು ಕಲಿಯಲು ನಾನು ಪ್ರಯತ್ನಿಸಿದೆ’ ಎಂದರು.

ಜಹೀರ್ 2014ರಲ್ಲಿ ನಿವೃತ್ತಿಯಾಗಿದ್ದರು. ಆ ಸಂದರ್ಭದಲ್ಲಿ ಆ್ಯಂಡರ್ಸನ್ ಯಶಸ್ಸಿನ ಉತ್ತುಂಗದಲ್ಲಿದ್ದರು.

‘ಪ್ರಸ್ತುತ ಜಸ್‌ಪ್ರೀತ್ ಬೂಮ್ರಾ ಅವರು ಅಮೋಘ ಬೌಲರ್ ಆಗಿದ್ದಾರೆ. ಭಾರತದ ಪಿಚ್‌ನಲ್ಲಿ ರಿವರ್ಸ್ ಸ್ವಿಂಗ್ ಪಾತ್ರ ದೊಡ್ಡದು. ಒಲಿ ಪೋಪ್ ಅವರನ್ನು ಔಟ್ ಮಾಡಿದ ಬೂಮ್ರಾ ಅವರ ಆ ಯಾರ್ಕರ್‌ ಅಸಾಧಾರಣವಾಗಿತ್ತು. ಇಂತಹ ಉತ್ಕೃಷ್ಟ ಕೌಶಲಗಳಿಂದಲೇ ಬೂಮ್ರಾ ಅವರು ವಿಶ್ವದ ಅಗ್ರಗಣ್ಯ ಬೌಲರ್ ಆಗಿರುವುದರಲ್ಲಿ ಸಂಶಯವೇ ಇಲ್ಲ’ ಎಂದು ಜಿಮ್ಮಿ ಶ್ಲಾಘಿಸಿದ್ದಾರೆ.

‘ಸದ್ಯದ ಕ್ರಿಕೆಟ್‌ನಲ್ಲಿ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರಷ್ಟು ಉತ್ತಮ ಬೌಲರ್‌ಗಳು ಇನ್ನೊಬ್ಬರಿಲ್ಲ. ಅವರು ವಿಶ್ವದರ್ಜೆಯ ಬೌಲರ್ ಆಗಿದ್ದಾರೆ. ಇಶಾಂತ್ ಶರ್ಮಾ ಕೂಡ ಅವರಂತೆಯೇ ಸಾಧನೆ ಮಾಡಿದವರು’ ಎಂದೂ ಜಿಮ್ಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.