ಹರಾರೆ: ಅಭಿಷೇಕ್ ಶರ್ಮಾ ಅವರ ಸಿಡಿಲಬ್ಬರದ ಶತಕದ ಮುಂದೆ ಜಿಂಬಾಬ್ವೆ ತಂಡವು ತತ್ತರಿಸಿತು.
ಭಾನುವಾರ ಇಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ 47 ಎಸೆತಗಳಲ್ಲಿ ಶತಕ ಗಳಿಸಿದರು. ಅದರಿಂದಾಗಿ ಭಾರತ ತಂಡವು 100 ರನ್‌ಗಳಿಂದ ಜಯಿಸಲು ಸಾಧ್ಯವಾಯಿತು. ಐದು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.
ಶನಿವಾರ ನಡೆದಿದ್ದ ಪಂದ್ಯದಲ್ಲಿ ಜಿಂಬಾಬ್ವೆ ಬೌಲಿಂಗ್ ಎದುರು ಪರದಾಡಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಅಬ್ಬರಿಸಿದರು. ಇದರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 234 ರನ್ ಗಳಿಸಿತು. ಅದಕ್ಕುತ್ತರವಾಗಿ ಜಿಂಬಾಬ್ಬೆ 18.4 ಓವರ್‌ಗಳಲ್ಲಿ 134 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ಶುಭಮನ್ ಗಿಲ್ (2 ರನ್) ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ ಉಳಿದ ಮೂವರು ಬ್ಯಾಟರ್‌ಗಳು ಅಮೋಘವಾಗಿ ಆಡಿದರು.
ಅದರಲ್ಲಿ ಅಭಿಷೇಕ್ 212.77ರ ಸ್ಟ್ರೈಕ್‌ರೇಟ್‌ನಲ್ಲಿ ಶತಕ ದಾಖಲಿಸಿದರು. 23 ವರ್ಷದ ಎಡಗೈ ಬ್ಯಾಟರ್ 7 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಎತ್ತಿದರು. ಅವರಿಗೆ ಋತುರಾಜ್ ಗಾಯಕವಾಡ (ಔಟಾಗದೆ 77; 47ಎ) ಜೊತೆ ನೀಡಿದರು. ಇಬ್ಬರೂ ಸೇರಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 137 ರನ್ ಸೇರಿಸಿದರು. 14ನೇ ಓವರ್‌ನವರೆಗೂ ಇವರ ಬೀಸಾಟ ಮುಂದುವರಿಯಿತು.
ವೆಲ್ಲಿಂಗ್ಟನ್ ಮಸಾಕಜಾ ಬೌಲಿಂಗ್‌ನಲ್ಲಿ ಅಭಿಷೇಕ್ ಅವರು ಡಿಯಾನ್ ಮೈಯರ್ಸ್‌ಗೆ ಕ್ಯಾಚಿತ್ತರು. ಅದರೊಂದಿಗೆ ಜೊತೆಯಾಟ ಮುರಿದುಬಿತ್ತು. ಶನಿವಾರ ನಡೆದಿದ್ದ ಪಂದ್ಯದಲ್ಲಿ ಅಭಿಷೇಕ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಅಭಿಷೇಕ್ ಅವರು ಕಳೆದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಿಂಚಿದ್ದರು.
ಅವರು ನಿರ್ಗಮಿಸಿದ ನಂತರ ಋತುರಾಜ್ ಜೊತೆಗೂಡಿದ ರಿಂಕು ಸಿಂಗ್ (ಔಟಾಗದೆ 48; 22ಎ) ಬೌಲರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಿದರು. ಐದು ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿದರು.
ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಭಾರತದ ವೇಗಿ ಮುಕೇಶ್ ಕುಮಾರ್ (37ಕ್ಕೆ3), ಆವೇಶ್ ಖಾನ್ (15ಕ್ಕೆ3) ಮತ್ತು ರವಿ ಬಿಷ್ಣೋಯಿ (11ಕ್ಕೆ2) ಕಡಿವಾಣ ಹಾಕಿದರು. ಜಿಂಬಾಬ್ವೆಯ ಆರಂಭಿಕ ಬ್ಯಾಟರ್ ವೆಸ್ಲಿ ಮದೇವೆರೆ ಅವರು (43; 39ಎ) ಹೋರಾಟ ಮಾಡಿದರು.
ಕೊನೆಯ 10 ಓವರ್‌ಗಳಲ್ಲಿ ಭಾರತ 160 ರನ್ ಪೇರಿಸಿತು. ಇದು ಕೂಡ ದಾಖಲೆಯಾಗಿದೆ.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 234 (ಅಭಿಷೇಕ್ ಶರ್ಮಾ 100, ಋತುರಾಜ್ ಗಾಯಕವಾಡ್ ಔಟಾಗದೆ 77, ರಿಂಕು ಸಿಂಗ್ ಔಟಾಗದೆ 48, ಮುಜರ್‌ಬಾನಿ 30ಕ್ಕೆ1, ಮಸಾಕಜಾ 29ಕ್ಕೆ1)
ಜಿಂಬಾಬ್ವೆ: 18.4 ಓವರ್‌ಗಳಲ್ಲಿ 134 (ವೆಸ್ಲಿ ಮದೆವೆರೆ 43, ಬ್ರಯನ್ ಬೆನೆಟ್ 26, ಲೂಕ್ ಜಾಂಗ್ವೆ 33, ಮುಕೇಶ್ ಕುಮಾರ್ 37ಕ್ಕೆ3, ಆವೇಶ್ ಖಾನ್ 15ಕ್ಕೆ3, ರವಿ ಬಿಷ್ಣೋಯಿ 11ಕ್ಕೆ2) ಫಲಿತಾಂಶ: ಭಾರತಕ್ಕೆ 100 ರನ್‌ಗಳ ಜಯ.
ಸಾಯಿ ಸುದರ್ಶನ್ ಪದಾರ್ಪಣೆ, ಭಾರತ ಬ್ಯಾಟಿಂಗ್ ಆಯ್ಕೆ..
ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು. ಸಾಯಿ ಸುದರ್ಶನ್ ಪದಾರ್ಪಣೆ ಮಾಡಿದ್ದಾರೆ. ಇವರಿಗಾಗಿ ಖಲೀಲ್ ಅಹ್ಮದ್ ತಮ್ಮ ಸ್ಥಾನ ಬಿಟ್ಟುಕೊಟ್ಟರು.
ಶನಿವಾರ ನಡೆದಿದ್ದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 13 ರನ್ ಅಂತರದ ಹೀನಾಯ ಸೋಲು ಕಂಡಿತ್ತು. 116 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ 102 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಮೊದಲ ಪಂದ್ಯದಲ್ಲಿ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಹಾಗೂ ವಿಕೆಟ್ ಕೀಪರ್ ಧ್ರುವ್ ಜುರೇಲ್ ಪದಾರ್ಪಣೆ ಮಾಡಿದ್ದರು.
ಭಾರತದ ಆಡುವ ಹನ್ನೊಂದರ ಬಳಗ ಇಂತಿದೆ:
ಶುಭಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ಋತುರಾಜ್ ಗಾಯಕವಾಡ್, ಸಾಯಿ ಸುದರ್ಶನ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.