ADVERTISEMENT

ಏಕದಿನ ಕ್ರಿಕೆಟ್: ಜಿಂಬಾಬ್ವೆ ಎದುರು ಪಾಕಿಸ್ತಾನಕ್ಕೆ ಹೀನಾಯ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 14:44 IST
Last Updated 24 ನವೆಂಬರ್ 2024, 14:44 IST
<div class="paragraphs"><p>ಜಿಂಬಾಬ್ವೆ ಆಟಗಾರರು ಹಾಗೂ ಪಾಕಿಸ್ತಾನ ತಂಡದ ನಾಯಕ&nbsp;ಮೊಹಮ್ಮದ್‌ ರಿಜ್ವಾನ್‌</p></div>

ಜಿಂಬಾಬ್ವೆ ಆಟಗಾರರು ಹಾಗೂ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್‌ ರಿಜ್ವಾನ್‌

   

ಚಿತ್ರಕೃಪೆ: X/@ZimCricketv

ಬಲುವಾಯೊ (ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿದೆ.

ADVERTISEMENT

ಇಲ್ಲಿನ 'ಕ್ವೀನ್ಸ್‌ ಸ್ಪೋರ್ಟ್ಸ್‌ ಕ್ಲಬ್‌' ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ, ಜಿಂಬಾಬ್ವೆ ದಾಳಿ ಎದುರು ರನ್‌ ಗಳಿಸಲು ಪರದಾಡಿತು.

21 ಓವರ್‌ ಆಡಿದರೂ ಕೇವಲ 60 ರನ್‌ ಗಳಿಸಲಷ್ಟೇ ಶಕ್ತವಾದ ಪಾಕ್‌ ಪಡೆ, ಅದಕ್ಕಾಗಿ 6 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಸುರಿದ ಭಾರಿ ಮಳೆ, ಪಂದ್ಯಕ್ಕೆ ಅಡ್ಡಿಯಾಯಿತು.

ಹೀಗಾಗಿ, ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಫಲಿತಾಂಶ ನಿರ್ಧರಿಸಿ, ಆತಿಥೇಯರಿಗೆ 80 ರನ್‌ ಅಂತರದ ಜಯ ಘೋಷಿಸಲಾಯಿತು.

ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು, ಮೊಹಮ್ಮದ್‌ ರಿಜ್ವಾನ್‌ ಪಡೆಗೆ ಮುಳುವಾಯಿತು. ಪಂದ್ಯ ನಿಂತಾಗ ರಿಜ್ವಾನ್‌ 19 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು.

ಜಿಂಬಾಬ್ವೆ ಪರ ಬ್ಲೆಸ್ಸಿಂಗ್‌ ಮುಜರಬಾನಿ, ಸೀನ್‌ ವಿಲಿಯಮ್ಸ್‌ ಮತ್ತು ಸಿಕಂದರ್ ರಾಜಾ ತಲಾ ಎರಡು ವಿಕೆಟ್‌ ಪಡೆದರು.

ಐಸಿಸಿ ಏಕದಿನ ಕ್ರಿಕೆಟ್‌ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡ 3ನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ 13 ಸ್ಥಾನದಲ್ಲಿದೆ.

ಸಾಧಾರಣ ಮೊತ್ತಕ್ಕೆ ಕುಸಿದ ಇರ್ವಿನ್‌ ಪಡೆ
ಟಾಸ್‌ ಗೆದ್ದ ಪಾಕ್‌ ನಾಯಕ ರಿಜ್ವಾನ್‌ ಎದುರಾಳಿಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟರು. ಅದರಂತೆ ಇನಿಂಗ್ಸ್ ಆರಂಭಿಸಿದ ಕ್ರೇಗ್ ಇರ್ವಿನ್‌ ಪಡೆ, 40.2 ಓವರ್‌ಗಳಲ್ಲಿ 205 ರನ್‌ ಗಳಿಸಿ ಆಲೌಟ್‌ ಆಯಿತು.

ಅನುಭವಿ ಸಿಕಂದರ್ ರಾಜಾ (39 ರನ್‌) ಹಾಗೂ 9ನೇ ಕ್ರಮಾಂಕದಲ್ಲಿ ಆಡಿದ ರಿಚರ್ಡ್‌ (48 ರನ್‌) ಹೊರತುಪಡಿಸಿ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ವಿಫಲರಾದರು.

ಪಾಕ್‌ ಪರ ಉತ್ತಮ ದಾಳಿ ಸಂಘಟಿಸಿದ ಫೈಸಲ್‌ ಅಕ್ರಮ್ ಮತ್ತು ಅಘಾ ಸಲ್ಮಾನ್‌ ತಲಾ ಮೂರು ವಿಕೆಟ್‌ ಪಡೆದರು. ಆಮೆರ್‌ ಜಮಲ್‌, ಮೊಹಮ್ಮದ್‌ ಹಸ್ನೈನ್‌ ಮತ್ತು ಹ್ಯಾರಿಸ್‌ ರೌಫ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.