ADVERTISEMENT

ಬೆಳ್ಳಿ ಬೆಡಗಿನ ದ್ಯುತಿ ಮನದಾಳ

ವರುಣ ನಾಯ್ಕರ
Published 16 ಸೆಪ್ಟೆಂಬರ್ 2018, 19:30 IST
Last Updated 16 ಸೆಪ್ಟೆಂಬರ್ 2018, 19:30 IST
ದ್ಯುತಿ ಚಾಂದ್
ದ್ಯುತಿ ಚಾಂದ್   

ಕ್ರೀಡೆಯ ಬಗೆಗೆ ನಿಮ್ಮಲ್ಲಿ ಆಸಕ್ತಿ ಹೇಗೆ ಹುಟ್ಟಿತು?

ಆಸಕ್ತಿ ಅಥವಾ ಇಷ್ಟದಿಂದಾಗಲಿ ನಾನು ಕ್ರೀಡಾ ಕ್ಷೇತ್ರಕ್ಕೆ ಬರಲಿಲ್ಲ. ಮನೆಯಲ್ಲಿ ಬಡತನವಿತ್ತು. ಪಾಲಕರದು ನೇಯ್ಗೆ ಕಾಯಕ. ಹೀಗಾಗಿ, ಜೀವನ ನಡೆಸುವುದು ಕಷ್ಟವಿತ್ತು. ವಿದ್ಯಾಭ್ಯಾಸದ ಖರ್ಚು ನಿಭಾಯಿಸಲು ತಂದೆ ತಾಯಿ ಹೆಣಗುತ್ತಿದ್ದರು. ಶಾಲಾ ಮಟ್ಟದಲ್ಲಿ ಏರ್ಪಡಿಸುತ್ತಿದ್ದ ಕ್ರೀಡಾಕೂಟಗಳಲ್ಲಿ ನನ್ನ ಅಕ್ಕ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಳು. ಇದೇ ಕಾರಣಕ್ಕೆ ಆಕೆಗೆ ಸ್ಕಾಲರ್ ಶಿಪ್ ಸಿಗುತ್ತಿತ್ತು. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದರೆ ಜೀವನ ನಡೆಸಲು ಸುಲಭವಾಗಬಹುದು ಎನ್ನುವ ಕಾರಣಕ್ಕೆ ಅಭ್ಯಾಸ ಆರಂಭಿಸಿದೆ. ಶಾಲೆ, ಅಂತರ ಕಾಲೇಜು ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದೆ.

ನಿಮ್ಮ ಸಾಧನೆಯ ಬಗ್ಗೆ ಹೇಳಿ?

ADVERTISEMENT

ಏಷ್ಯನ್ ಕ್ರೀಡಾಕೂಟದಲ್ಲಿ ತೋರಿದ ಸಾಧನೆ ತೃಪ್ತಿ ತಂದಿದೆ. ಪುರುಷ ಹಾರ್ಮೋನುಗಳ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ನನ್ನ ಮೇಲೆ ನಿಷೇಧ ಹೇರಿತ್ತು. ಹೀಗಾಗಿ 2014ರ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ಕ್ರೀಡಾ ನ್ಯಾಯಾಲಯ ನನಗೆ ನ್ಯಾಯ ಒದಗಿಸಿತ್ತು. ಇದರೊಂದಿಗೆ ಕುಟುಂಬದಲ್ಲಿನ ಬಡತನ, ಕ್ರೀಡಾ ತರಬೇತಿ ಪಡೆಯಲು ಪಟ್ಟ ಪಡಿಪಾಟಲು ಹಾಗೂ ಇನ್ನೂ ಮುಂತಾದ ಸಂಕಷ್ಟಗಳನ್ನು ನೆನಸಿಕೊಂಡರೆ ಈಗ ನಿರಾಳ ಭಾವದಲ್ಲಿ ಮುಳುಗುತ್ತೇನೆ. ನನ್ನ ಬದುಕಿನ ಹಾದಿಯಲ್ಲಿ ಸಕಲ ರೀತಿಯ ನೆರವು ನೀಡಿದ ಎಲ್ಲರಿಗೂ ಆಭಾರಿ.

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ತಿಳಿಸಿ?

ಭುವನೇಶ್ವರದ ಕಳಿಂಗ ಕಾಲೇಜ್‌ನಲ್ಲಿ ಎಲ್.ಎಲ್.ಬಿ ಓದುತ್ತಿದ್ದೇನೆ. ಪದವಿ ಕೊನೆಯ ವರ್ಷದಲ್ಲಿದ್ದೇನೆ. ಈ ಸಂಸ್ಥೆಯ ಸ್ಥಾಪಕರಾದ ಅಚ್ಯುತ್ ಸಮಂತ್ ಅವರು ನನ್ನ ವಿದ್ಯಾಭ್ಯಾಸ ಹಾಗೂ ಕ್ರೀಡಾ ತರಬೇತಿಗೆ ಆರ್ಥಿಕ ನೆರವು ನೀಡಿದ್ದಾರೆ. ನನ್ನ ಹೆಚ್ಚಿನ ಸಮಯ ತರಬೇತಿಗೆ ಮೀಸಲಾಗಿರುವುದರಿಂದ ಓದಲು ಅಷ್ಟಾಗಿ ಸಮಯ ಸಿಗುವುದಿಲ್ಲ.

ಭಾರತದಲ್ಲಿ ಅಥ್ಲೆಟಿಕ್ಸ್‌ಗೆ ಸಂಬಂಧಿಸಿದ ತರಬೇತಿ ಹೇಗಿದೆ?

ತರಬೇತಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳು ನಮ್ಮಲ್ಲಿವೆ. ಆದರೆ, ನುರಿತ ಕೋಚ್‌ಗಳ ಸಂಖ್ಯೆ ಕಡಿಮೆ. ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ನೋಡಿದರೆ ಇದರಿಂದ ಭಾರತದ ಪ್ರತಿಭಾಶಾಲಿ ಅಥ್ಲೀಟ್‌ಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಈ ದೆಸೆಯಲ್ಲಿ ನಮ್ಮ ರಾಷ್ಟ್ರದಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ಅವಶ್ಯಕ. ನನ್ನನ್ನು ಹೊರತುಪಡಿಸಿ ಇತ್ತೀಚೆಗೆ ನಡೆದ ಪ್ರಮುಖ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಎಲ್ಲರೂ ವಿದೇಶಗಳಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಕೂಡ ವಿದೇಶಿ ತರಬೇತಿ ಕೇಂದ್ರಗಳಲ್ಲಿ ತಯಾರಿ ನಡೆಸುತ್ತೇನೆ.

ಮುಂದಿನ ಹಾದಿ ಹಾಗೂ ಕನಸುಗಳು?

ಪ್ರತಿ ಟೂರ್ನಿ ಹಾಗೂ ಕ್ರೀಡಾಕೂಟಗಳು ನನಗೆ ಹೊಸ ಸವಾಲು ನೀಡುತ್ತವೆ. ಮುಂದಿನ ದಿನಗಳಲ್ಲಿ ಏಷ್ಯನ್ ಚಾಂಪಿಯನ್‌ಷಿಪ್, ವಿಶ್ವ ಚಾಂಪಿಯನ್‌ಷಿಪ್‌ಗಳಿವೆ. ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದೇನೆ. 2020ರ ಟೋಕಿಯೊ ಒಲಿಂಪಿಕ್ಸ್‌ ದೊಡ್ಡ ಗುರಿ. ಆದರೆ, ಅದಕ್ಕೂ ಮುನ್ನ ನನ್ನ ಸಾಮರ್ಥ್ಯ ವೃಧ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕೋಚ್ ಎನ್. ರಮೇಶ್ ಅವರು ತರಬೇತಿಯ ರೂಪುರೇಷೆ ಸಿದ್ಧಪಡಿಸಿದ್ದಾರೆ. ಅದಕ್ಕೆ ಅನುಗುಣವಾಗಿ ತಯಾರಿ ಮಾಡಿಕೊಳ್ಳುತ್ತೇನೆ. ಕ್ರಮಿಸಬೇಕಾದ ಹಾದಿ ತುಂಬ ದೂರವಿದೆ.

**

ಕ್ರೀಡಾಪಟುಗಳಿಗೆ ಧನಸಹಾಯ ಒದಗಿಸುವ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ನನ್ನ ಹೆಸರನ್ನು ಸೇರಿಸುವ ಬಗ್ಗೆ ಕೇಂದ್ರ ಕ್ರೀಡಾ ಸಚಿವರು ಭರವಸೆ ನೀಡಿದ್ದಾರೆ. ಜೊತೆಗೆ, ಒಡಿಶಾ ಸರ್ಕಾರ ದೊಡ್ಡ ಮೊತ್ತದ ಬಹುಮಾನ ಘೋಷಿಸಿದೆ. ಕಡುಬಡತನದ ಹಿನ್ನೆಲೆಯಿಂದ ಬಂದಿರುವ ನನ್ನಂಥವರಿಗೆ ಇದಕ್ಕಿಂತ ಇನ್ನೇನು ಬೇಕು?

–ದ್ಯುತಿ ಚಾಂದ್, ಅಥ್ಲೀಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.