ADVERTISEMENT

ಫ್ರಾನ್ಸ್ ಫುಟ್‌ಬಾಲ್ ದಿಗ್ಗಜ ಜಸ್ಟ್ ಫಾಂಟೇನ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 4:49 IST
Last Updated 2 ಮಾರ್ಚ್ 2023, 4:49 IST
ಜಸ್ಟ್ ಫಾಂಟೇನ್ 
ಜಸ್ಟ್ ಫಾಂಟೇನ್    

ಪ್ಯಾರಿಸ್ (ಎಎಫ್‌ಪಿ): ಫ್ರಾನ್ಸ್ ಫುಟ್‌ಬಾಲ್ ತಂಡದ ದಿಗ್ಗಜ ಸ್ಟ್ರೈಕರ್ ಜಸ್ಟ್ ಲೂಯಿಸ್ ಫಾಂಟೇನ್ (89) ಬುಧವಾರ ನಿಧನರಾದರು.

1958ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅವರು ಗಳಿಸಿದ್ದ 13 ಗೋಲುಗಳ ಸಾಧನೆ ಅವಿಸ್ಮರಣೀಯವಾಗಿದೆ. ಏಕೆಂದರೆ ಆರು ಪಂದ್ಯಗಳಲ್ಲಿ ಅವರು ಮಾಡಿದ್ದ ದಾಖಲೆಯನ್ನು ಮುರಿಯುವುದು ಬಹುಕಾಲದವರೆಗೆ ಸಾಧ್ಯವಾಗಿರಲಿಲ್ಲ. ಇದುವರೆಗೂ ಜಸ್ಟ್‌ ಅವರಿಗಿಂತ ಹೆಚ್ಚು ಗೋಲು ಗಳಿಸಿದವರು ಮೂವರು ಆಟಗಾರರು ಮಾತ್ರ. ಜರ್ಮನಿಯ ಮಿರೊಸ್ಲೋವ್ ಕ್ಲೋಸ್ (16), ಬ್ರೆಜಿಲ್‌ನ ರೊನಾಲ್ಡೊ (15) ಮತ್ತು ವೆಸ್ಟ್ ಜರ್ಮನಿಯ ಗೆರ್ಡ್ ಮುಲ್ಲರ್ (14) ಅವರು ಜಸ್ಟ್‌ ದಾಖಲೆಯನ್ನು ಮೀರಿದ್ದಾರೆ. ಈಚೆಗೆ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿಅವರು ಜಸ್ಟ್ ಸಾಧನೆಯನ್ನು ಸರಿಗಟ್ಟಿದ್ದರು.

1958ರ ವಿಶ್ವಕಪ್‌ ಸ್ವೀಡನ್‌ನಲ್ಲಿ ನಡೆದಿತ್ತು. ಆ ಟೂರ್ನಿಯಲ್ಲಿ ಬ್ರೆಜಿಲ್‌ನ 17 ವರ್ಷದ ಪೆಲೆಯ ಮಿಂಚಿನಾಟ ರಂಗೇರಿತ್ತು. ಅದರಿಂದಾಗಿಯೇ ಟೂರ್ನಿಯ ಬಗ್ಗೆ ಮಾತನಾಡುವಾಗಲೆಲ್ಲ ಪೆಲೆಯ ಸಾಧನೆಯೇ ಹೆಚ್ಚು ಚರ್ಚಿತವಾಗುತ್ತದೆ. ಬ್ರೆಜಿಲ್ ತಂಡವು ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಜಯಿಸಲು ಪೆಲೆ ಹ್ಯಾಟ್ರಿಕ್ ಕಾರಣವಾಗಿತ್ತು.

ADVERTISEMENT

ಆದರೆ ಫಾಂಟೇನ್ ಅವರ ಸಾಧನೆಯು ವೈಯಕ್ತಿಕ ಶ್ರೇಷ್ಠವಾಗಿತ್ತು. ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಜರ್ಮನಿ ವಿರುದ್ಧ ನಾಲ್ಕು ಗೋಲು ಬಾರಿಸಿದ್ದರು.

ಆದರೆ ಜಸ್ಟ್ ವೃತ್ತಿಜೀವನಕ್ಕೆ 1962ರಲ್ಲಿ ತೆರೆ ಬಿತ್ತು. ಆಗ ಅವರಿಗೆ ಕೇವಲ 28 ವರ್ಷವಾಗಿತ್ತು. ಕಾಲಿನ ಮೂಳೆಮುರಿತದಿಂದಾಗಿ ಹೆಚ್ಚು ವರ್ಷಗಳ ಕಾಲ ಆಟ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಒಟ್ಟು 21 ಪಂದ್ಯಗಳಲ್ಲಿ 30 ಗೋಲು ಗಳಿಸಿದ್ದಾರೆ.

ಆಟದಿಂದ ದೂರ ಸರಿದ ನಂತರ ಅವರು ಕೋಚ್ ಆಗಿಯೂ ಗಮನ ಸೆಳೆದರು. 1967ರಲ್ಲಿ ಫ್ರಾನ್ಸ್ ತಂಡದ ಕೋಚ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.