ADVERTISEMENT

ಸುಬ್ರತೊ ಕಪ್‌ ಫುಟ್‌ಬಾಲ್‌ ಇಂದಿನಿಂದ: 36 ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 1:35 IST
Last Updated 20 ಆಗಸ್ಟ್ 2024, 1:35 IST
2023ರ ಆವೃತ್ತಿಯ ಚಾಂಪಿಯನ್‌ ಮೊಹಾಲಿಯ ಮಿನರ್ವ ಪಬ್ಲಿಕ್ ಸ್ಕೂಲ್
2023ರ ಆವೃತ್ತಿಯ ಚಾಂಪಿಯನ್‌ ಮೊಹಾಲಿಯ ಮಿನರ್ವ ಪಬ್ಲಿಕ್ ಸ್ಕೂಲ್   

ಬೆಂಗಳೂರು: 63ನೇ ಸುಬ್ರತೊ ಕಪ್‌ ಫುಟ್‌ಬಾಲ್‌ ಟೂರ್ನಿಯ ಸಬ್ ಜೂನಿಯರ್ ಬಾಲಕರ ವಿಭಾಗದ ಪಂದ್ಯಗಳು ನಗರದ ವಿವಿಧ ಸ್ಥಳಗಳಲ್ಲಿ ಮಂಗಳವಾರ ಆರಂಭವಾಗಲಿದೆ.

ಬೆಂಗಳೂರಿನ ಎಎಸ್‌ಸಿ ‌ಸೆಂಟರ್‌, ಜಾಲಹಳ್ಳಿಯ ಏರ್‌ಫೋರ್ಸ್‌ ಸ್ಕೂಲ್‌, ಯಲಹಂಕದ ಏರ್‌ಫೋರ್ಸ್‌ ಸ್ಕೂಲ್‌ ಮೈದಾನ ಮತ್ತು ಎಚ್‌ಕ್ಯು ಟ್ರೈನಿಂಗ್ ಕಮಾಂಡ್ ಫುಟ್‌ಬಾಲ್ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಗೆ ಅಂತರರಾಷ್ಟ್ರೀಯ ಸ್ವರೂಪ ನೀಡಲು ವಿದೇಶದ ತಂಡಗಳನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಶ್ರೀಲಂಕಾ ಸ್ಕೂಲ್ಸ್ ಫುಟ್‌ಬಾಲ್ ಅಸೋಸಿಯೇಷನ್ ​​ಮತ್ತು ಬಾಂಗ್ಲಾದೇಶ ಕ್ರಿರಾ ಶಿಖಾ ಪ್ರೊಟಿಸ್ತಾನ್ ತಂಡಗಳು ಭಾಗವಹಿಸುತ್ತಿವೆ. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪ್ರತಿನಿಧಿಸುವ ಒಟ್ಟು 36 ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ.

ADVERTISEMENT

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೇರಳದ ಮಲಪ್ಪುರಂ ಎನ್‌ಎನ್‌ಎಂಎಚ್‌ಎಸ್‌ಎಸ್ ಚೇಲೆಂಬ್ರಾ ತಂಡವು ಎನ್‌ಸಿಸಿ ಗೋವಾ ಬೆಟಾಲಿಯನ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಜಾಲಹಳ್ಳಿಯ ಏರ್‌ಫೋರ್ಸ್ ಸ್ಕೂಲ್‌ನಲ್ಲಿ ಬೆಳಿಗ್ಗೆ 7.30ಕ್ಕೆ ಆರಂಭವಾಗಲಿದೆ.

36 ತಂಡಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಗುಂಪು ಹಂತದ ಪಂದ್ಯಗಳು ಇದೇ 23ರವರೆಗೆ ನಡೆಯಲಿವೆ. 25ರಂದು ಕ್ವಾರ್ಟರ್ ಫೈನಲ್‌ ಪಂದ್ಯಗಳು, 26ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. 28ರಂದು ಎಎಸ್‌ಸಿ ಸೆಂಟರ್‌ನಲ್ಲಿ ಫೈನಲ್‌ ಹಣಾಹಣಿ ನಡೆಯಲಿದೆ.

‌ಸುಬ್ರತೊ ಕಪ್‌, ದೇಶದ ಅತಿ ಹಳೆಯ ಅಂತರ ಶಾಲಾ ಫುಟ್‌ಬಾಲ್ ಟೂರ್ನಿ ಆಗಿದೆ. ಈ ಹಿಂದೆ ಇದ್ದ 14 ವರ್ಷದೊಳಗಿನವರ ವಿಭಾಗವನ್ನು ಇದೇ ಮೊದಲ ಬಾರಿ 15 ವರ್ಷ ವಯಸ್ಸಿನ ಮಿತಿಗೆ ಹೆಚ್ಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.