ನವದೆಹಲಿ: ದೋಹಾದಲ್ಲಿ ಮಂಗಳವಾರ ಕತಾರ್ ವಿರುದ್ಧ ವಿಶ್ವಕಪ್ ಫುಟ್‌ಬಾಲ್ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ನೀಡಿದ ವಿವಾದಾತ್ಮಕ ಗೋಲಿಗೆ ಸಂಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಒತ್ತಾಯಿಸಿದೆ.
‘ತಂಡಕ್ಕೆ ಆಗಿರುವ ಅನ್ಯಾಯದ ಬಗ್ಗೆ ಗಮನಹರಿಸಬೇಕು’ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಬುಧವಾರ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
‘ಭಾರತಕ್ಕೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಗೋಲು ಹೊಡೆಯುವ ಕೆಲವೇ ಕ್ಷಣಗಳ ಮೊದಲು ಚೆಂಡು ಅಂಕಣದ ಗೆರೆಯಾಚೆ ಹೋಗಿದ್ದು ಸ್ಪಷ್ಟವಾಗಿದ್ದರೂ ದಕ್ಷಿಣ ಕೊರಿಯಾದ ರೆಫ್ರಿ ಕಿಮ್ ವೂ ಸುಂಗ್ ಎದುರಾಳಿಗೆ ಗೋಲು ನೀಡಿದ್ದಾರೆ. ಈ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕು ಎಂದು ಭಾರತ ಕೇಳಿದೆ’ ಎಂದು ಚೌಬೆ ಹೇಳಿದ್ದಾರೆ. ಜಸ್ಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಈ ಗೋಲಿನಿಂದ 1–1ರಲ್ಲಿ ಸ್ಕೋರ್ ಸಮ ಮಾಡಿಕೊಂಡ ಕತಾರ್ ಅಂತಿಮವಾಗಿ ಪಂದ್ಯವನ್ನು 2–1ರಿಂದ ಗೆದ್ದುಕೊಂಡಿತ್ತು.
ಲಾಲಿಯನ್ಜುವಾಲಾ ಚಾಂಗ್ಟೆ 37ನೇ ನಿಮಿಷ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಯೂಸುಫ್ ಏಮೆನ್ ಮೂಲಕ 73ನೇ ನಿಮಿಷ ಈ ವಿವಾದಾತ್ಮಕ ಗೋಲು ದಾಖಲಾಗಿತ್ತು. 85ನೇ ನಿಮಿಷ ಅಹಮದ್ ಅಲ್ ರಾಯಿ ಕತಾರ್ ಪರ ಗೆಲುವಿನ ಗೋಲು ಗಳಿಸಿದ್ದರು.
‘ಸೋಲು ಗೆಲುವು ಆಟದ ಅವಿಭಾಜ್ಯ ಅಂಗ. ನಾವಿದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇವೆ. ಆದರೆ ಭಾರತ ವಿರುದ್ಧ ಎರಡು ಗೋಲುಗಳಲ್ಲಿ ಒಂದು ಗೋಲು ಗಳಿಸಿದ ರೀತಿ ಕೆಲವು ಪ್ರಶ್ನೆಗಳನ್ನು ಹಾಗೇ ಉಳಿಸಿಕೊಂಡಿದೆ’ ಎಂದು ಚೌಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಈ ಪಂದ್ಯದ ನಿರ್ವಹಣೆಯಲ್ಲಾಗಿರುವ ಲೋಪದ ಬಗ್ಗೆ ಮತ್ತು ಅದರಿಂದ ನಮಗೆ ಮೂರನೇ ಹಂತದ ಕ್ವಾಲಿಫೈಯಿಂಗ್ ಅವಕಾಶ ತಪ್ಪಿರುವ ಬಗ್ಗೆ ಫಿಫಾ ಕ್ವಾಲಿಫೈಯರ್ಸ್ ಮುಖ್ಯಸ್ಥರಿಗೆ, ಎಎಫ್‌ಸಿ ರೆಫ್ರಿ ಮುಖ್ಯಸ್ಥರಿಗೆ ಮತ್ತು ಮ್ಯಾಚ್ ಕಮಿಷನರ್‌ಗೆ ಪತ್ರ ಬರೆದಿದ್ದೇವೆ. ಫಿಫಾ ಮತ್ತು ಎಎಫ್‌ಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದೆಂಬ ನಂಬಿಕೆ ಇದೆ’ ಎಂದರು.
ಈ ಪಂದ್ಯಕ್ಕೆ ಇರಾನ್‌ನ ಹಮೆದ್ ಮೊಮಿನಿ ಅವರು ಮ್ಯಾಚ್ ಕಮಿಷನರ್ ಆಗಿದ್ದರು.
ಆಗಿದ್ದೇನು?
ಪಂದ್ಯದ 73ನೇ ನಿಮಿಷ ಅಬ್ದುಲ್ಲಾ ಅಲ್ಹಾರ್ಕ್ ಅವರ ಫ್ರೀಕಿಕ್‌ನಲ್ಲಿ ಯೂಸೆಫ್ ಏಮೆನ್ ಚೆಂಡನ್ನು ಗೋಲಿನೊಳಗೆ ಹೆಡ್ ಮಾಡಲು ಯತ್ನಿಸಿದ್ದರು. ಅವರ ಪ್ರಯತ್ನವನ್ನು ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಡೆದಿದ್ದರು. ಸಂಧು ಆ ಯತ್ನದಲ್ಲಿ ನೆಲಕ್ಕೊರಗುವ ಮೊದಲು ಚೆಂಡು ಗೋಲು ಪೋಸ್ಟ್ ಸನಿಹದಲ್ಲೇ ಗೆರೆ ದಾಟಿದ್ದನ್ನು ಗಮನಿಸಿದ್ದರು. ಆದರೆ ಹಶ್ಮಿ ಹುಸೇನ್ ಚೆಂಡನ್ನು ಮತ್ತೆ ಅಂಕಣದೊಳಕ್ಕೆ ಒದ್ದರು. ಆಗ ಚೆಂಡನ್ನು ಪಡೆದ ಐಮೆನ್ ಅದನ್ನು ಗೋಲಿನೊಳಕ್ಕೆ ನಿರ್ದೇಶಿಸಿದ್ದರು.
ಚೆಂಡು ಗೆರೆಯಾಚೆ ಹೋಗಿದ್ದರಿಂದ ಆ ಕ್ಷಣಕ್ಕೆ ಆಟ ನಿಲ್ಲಿಸಿ, ಫ್ರೀಕಿಕ್‌ನೊಡನೆ ಪಂದ್ಯ ಮುಂದುವರಿಸಬೇಕಿತ್ತು. ಚೆಂಡಿನ ಜೊತೆ ಕೊನೆಯ ಬಾರಿ ಗುರುಪ್ರೀತ್ ಸಂಧು ಸಂಪರ್ಕಕ್ಕೆ ಬಂದಿದ್ದರಿಂದ ಫ್ರೀಕಿಕ್ ಪ್ರಕ್ರಿಯೆ ಸಹಜವಾಗಿತ್ತು. ಆದರೆ ರೆಫ್ರಿ, ಕತಾರ್‌ಗೆ ಗೋಲು ನೀಡಿ ಭಾರತದ ಆಟಗಾರರ ಹತಾಶೆಗೆ ಕಾರಣರಾದರು. ಆ ಕ್ಷಣಕ್ಕೆ ಭಾರತದ ಆಟಗಾರರ ಪ್ರತಿಭಟನೆಯನ್ನೂ ಲೆಕ್ಕಿಸಲಿಲ್ಲ. ಆನ್‌ಫೀಲ್ಡ್ ಅಂಪೈರ್ ಕೂಡ ರೆಫ್ರಿ ನಿರ್ಧಾರವನ್ನು ಸಮ್ಮತಿಸಿದ್ದರು.
ಫಿಫಾ ನಿಯಮದ ಪ್ರಕಾರ ಚೆಂಡು ಗೋಲ್‌ಲೈನ್ ಅಥವಾ ಆಟದ ವೇಳೆ ಗಾಳಿಯಲ್ಲಿದ್ದರೂ ಟಚ್‌ಲೈನ್‌ಗಿಂತ ಆಚೆ ಹೋದಲ್ಲಿ ‘ಔಟ್ ಆಫ್ ಪ್ಲೇ’ ಎನ್ನಲಾಗುತ್ತದೆ.
ಗೋಲ್‌ಕೀಪರ್ ಗುರುಪ್ರೀತ್ ಸಂಧು ಅವರು ‘ಇದು ದುರದೃಷ್ಟಕರ ಫಲಿತಾಂಶ. ಯಾರೂ ನಮಗೆ ತಾವೇ ಆಗಿ ಕೊಡುವುದಿಲ್ಲ. ನಾವೇ ಪಡೆಯಬೇಕು!’ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.