ADVERTISEMENT

ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್: ವಿಯೆಟ್ನಾಂ ವಿರುದ್ಧ ಇರಾನ್‌ಗೆ ಜಯ

ಏಜೆನ್ಸೀಸ್
Published 12 ಜನವರಿ 2019, 19:53 IST
Last Updated 12 ಜನವರಿ 2019, 19:53 IST
ಇರಾನ್‌ (ಬಿಳಿ ಪೋಷಾಕು) ಮತ್ತು ವಿಯೆಟ್ನಾಂ ತಂಡದ ಆಟಗಾರರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ
ಇರಾನ್‌ (ಬಿಳಿ ಪೋಷಾಕು) ಮತ್ತು ವಿಯೆಟ್ನಾಂ ತಂಡದ ಆಟಗಾರರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ   

ಅಬುಧಾಬಿ: ಸರ್ದಾರ್‌ ಅಜಮೌನ್‌, ಅಮೋಘ ಆಟದ ಮೂಲಕ ಶನಿವಾರ ಅಲ್‌ ನಹಯಾನ್‌ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ಅವರು ಗಳಿಸಿದ ಎರಡು ಗೋಲುಗಳ ಬಲದಿಂದ ಇರಾನ್‌ ತಂಡ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿಯಿತು.

‘ಡಿ’ ಗುಂಪಿನ ಹಣಾಹಣಿಯಲ್ಲಿ ಇರಾನ್‌ 2–0 ಗೋಲುಗಳಿಂದ ವಿಯೆಟ್ನಾಂ ತಂಡವನ್ನು ಮಣಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಈ ತಂಡದ ಖಾತೆಯಲ್ಲಿ ಆರು ಪಾಯಿಂಟ್ಸ್ ಇವೆ.

ADVERTISEMENT

ಇರಾನ್‌ ತಂಡ 4–1–4–1ರ ಯೋಜನೆಯೊಂದಿಗೆ ಕಣಕ್ಕಿಳಿದರೆ, ವಿಯೆಟ್ನಾಂ 5–4–1ರ ರಣನೀತಿ ಹೆಣೆದು ಆಡಲಿಳಿದಿತ್ತು. ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ‍ಪೈಪೋಟಿ ನಡೆಸಿದವು. ಹೀಗಾಗಿ ಮೊದಲ 35 ನಿಮಿಷಗಳ ಆಟ ಗೋಲು ರಹಿತವಾಗಿತ್ತು. ನಂತರ ಇರಾನ್‌ ಆಟಗಾರರು ಮೋಡಿ ಮಾಡಿದರು. 38ನೇ ನಿಮಿಷದಲ್ಲಿ ಅಜಮೌನ್‌ ಕಾಲ್ಚಳಕ ತೋರಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಸೇರಿಸಿದರು.

1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಇರಾನ್‌ ತಂಡ ದ್ವಿತೀಯಾರ್ಧದ ಶುರುವಿನಲ್ಲೂ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ ಎದುರಿಸಿತು. 69ನೇ ನಿಮಿಷದಲ್ಲಿ ಅಜಮೌನ್‌ ಮತ್ತೊಮ್ಮೆ ಮಿಂಚಿದರು. ಅಮೋಘ ರೀತಿಯಲ್ಲಿ ಗೋಲು ಬಾರಿಸಿದ ಅವರು ತಂಡದ ಸಂಭ್ರಮಕ್ಕೆ ಕಾರಣರಾದರು.

ಅಲ್‌ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ‘ಡಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಇರಾಕ್‌ 3–0 ಗೋಲುಗಳಿಂದ ಯೆಮನ್‌ ತಂಡವನ್ನು ಸೋಲಿಸಿತು.

ಇರಾಕ್‌ ತಂಡದ ಮುಹಾನದ್‌ ಅಲಿ (11ನೇ ನಿಮಿಷ), ಬಷರ್‌ ರಸನ್‌ (19 ನೇ ನಿ.) ಮತ್ತು ಅಲಾ ಅಬ್ಬಾಸ್‌ (90+1ನೇ ನಿ.) ತಲಾ ಒಂದು ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.