ಅಬುಧಾಬಿ: ರೋಚಕ ಹಣಾಹಣಿಯ ಕೊನೆಯಲ್ಲಿ ಏಕೈಕ ಗೋಲು ಗಳಿಸಿದ ಥಾಯ್ಲೆಂಡ್ ತಂಡ ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಜಯ ಗಳಿಸಿತು. ಅಲ್ ಮಕ್ಟೋಮ್ ಕ್ರೀಡಾಂಗಣದಲ್ಲಿ ಸಂಜೆ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಬಹರೇನ್ ತಂಡ ಥಾಯ್ಲೆಂಡ್‌ಗೆ 0–1ರಿಂದ ಮಣಿಯಿತು.
ಆರಂಭದಿಂದಲೇ ಆಕ್ರಮಣಕ್ಕೆ ಒತ್ತು ನೀಡಿದ ತಂಡಗಳು ಮೊದಲಾರ್ಧದಲ್ಲಿ ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. ಸತತವಾಗಿ ಎದುರಾಳಿ ಪಾಳಯಕ್ಕೆ ನುಗ್ಗಿದ ಆಟಗಾರರಿಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.
ಐವರು ಡಿಫೆಂಡರ್‌ಗಳು ಮತ್ತು ನಾಲ್ವರು ಫಾರ್ವರ್ಡ್ ಆಟಗಾರರೊಂದಿಗೆ ಕಣಕ್ಕೆ ಇಳಿದ ಥಾಯ್ಲೆಂಡ್ ತಂತ್ರಕ್ಕೆ ಪ್ರತಿಯಾಗಿ ಬಹರೇನ್ ನಾಲ್ವರು ಡಿಫೆಂಡರ್, ಇಬ್ಬರು ಮಿಡ್‌ಫೀಲ್ಡರ್‌ಗಳು ಮತ್ತು ಮೂವರು ಫಾರ್ವರ್ಡ್ ಆಟಗಾರರೊಂದಿಗೆ ಉತ್ತರ ನೀಡಲು ಸಜ್ಜಾಗಿತ್ತು.
45 ನಿಮಿಷಗಳ ಅವಧಿಯಲ್ಲಿ ಥಾಯ್ಲೆಂಡ್ ರಕ್ಷಣಾ ವಿಭಾಗದ ನಾಲ್ವರು ಹಳದಿ ಕಾರ್ಡ್ ‘ದಂಡನೆಗೆ’ ಒಳಗಾದರು.
ದ್ವಿತೀಯಾರ್ಧದಲ್ಲಿ ಆಟ ಮತ್ತಷ್ಟು ರೋಚಕವಾಯಿತು. ಬಲಿಷ್ಠ ಆಕ್ರಮಣ ವಿಭಾಗ ಹೊಂದಿದ್ದರೂ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 1–4ರಿಂದ ಸೋತಿದ್ದ ಥಾಯ್ಲೆಂಡ್ ಈ ಪಂದ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸುವ ಪಣ ತೊಟ್ಟು ಎದುರಾಳಿ ಪಾಳಯದಲ್ಲಿ ನಿರಂತರ ದಾಳಿ ನಡೆಸಿತು.
58ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್ ಚಣಾತಿಪ್ ಸೊಂಕ್ರಾಸಿನ್ ಅವರು ಥಾಯ್ಲೆಂಡ್ ಪಾಳಯದಲ್ಲಿ ಸಂಭ್ರಮ ಮೂಡಲು ಕಾರಣರಾದರು. ಮೋಹಕ ಗೋಲು ಗಳಿಸಿದ ಅವರು ಮುನ್ನಡೆ ತಂದುಕೊಟ್ಟರು. ಚೆಂಡಿನ ಮೇಲಿನ ಆಧಿಪತ್ಯ ಮತ್ತು ಆಕ್ರಮಣದಲ್ಲಿ ಮುಂದಿದ್ದರೂ ಬಹರೇನ್ ಸಫಲವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.