ADVERTISEMENT

ಎಎಫ್‌ಸಿ 16 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ ರದ್ದು

ಪಿಟಿಐ
Published 25 ಜನವರಿ 2021, 14:43 IST
Last Updated 25 ಜನವರಿ 2021, 14:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ವಾಲಾಲಂಪುರ: ಏಷ್ಯನ್ ಫುಟ್‌ಬಾಲ್ ಫೆಡರೇಷನ್‌ (ಎಎಫ್‌ಸಿ) ಕೋವಿಡ್‌–19 ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ತನ್ನ ಭಾಗೀದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಟೂರ್ನಿಗಳನ್ನು ರದ್ದು ಅಥವಾ ಮುಂದೂಡಲು ಸೋಮವಾರ ನಿರ್ಧರಿಸಿದೆ. ಭಾರತ ತಂಡ ಆಡಬೇಕಿದ್ದ ಟೂರ್ನಿಯು ಇದರಲ್ಲಿ ಸೇರಿದೆ.

ಭಾರತ ತಂಡವು ಮುಂಬರುವ ಎಎಫ್‌ಸಿ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. 2020ರಲ್ಲಿ ಈ ಟೂರ್ನಿಯು ಎರಡು ಬಾರಿ ಮರುನಿಗದಿಯಾಗಿ ಈ ವರ್ಷ ನಡೆಯಬೇಕಿತ್ತು. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಈ ಟೂರ್ನಿಯು ಈಗ ರದ್ದಾಗಿದೆ.

‘2021ರಲ್ಲಿ ನಡೆಯಬೇಕಿದ್ದ ಫಿಫಾ 17 ವರ್ಷದೊಳಗಿನವರ ಹಾಗೂ 20 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಗಳನ್ನು ರದ್ದುಗೊಳಿಸಿರುವ ನಿರ್ಧಾರ ಹಾಗೂ ಏಷ್ಯಾದ ಯುವ ಆಟಗಾರರ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಂಡು, ಬಹ್ರೇನ್‌ನಲ್ಲಿ ನಡೆಯಬೇಕಿದ್ದ ಎಎಫ್‌ಸಿ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಹಾಗೂ ಉಜ್ಬೇಕಿಸ್ತಾನದಲ್ಲಿ ನಿಗದಿಯಾಗಿದ್ದ 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ಗಳನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ‘ ಎಂದು ಎಎಫ್‌ಸಿ ಹೇಳಿದೆ.

ADVERTISEMENT

ಇದೇ ಟೂರ್ನಿಗಳ ಮುಂದಿನ ಆವೃತ್ತಿಗಳು ಅದೇ ದೇಶಗಳ ಆತಿಥ್ಯದಲ್ಲೇ 2023ಕ್ಕೆ ನಡೆಯಲಿವೆ.

16 ವರ್ಷದೊಳಗಿನವರ ಟೂರ್ನಿಯು ಮೊದಲು 2020ರ ಸೆಪ್ಟೆಂಬರ್‌ 16ರಿಂದ ಅಕ್ಟೋಬರ್ 3ರವರೆಗೆ ನಿಗದಿಯಾಗಿತ್ತು. ಬಳಿಕ ನವೆಂಬರ್‌ 25ರಿಂದ ಡಿಸೆಂಬರ್ 12ರ ಒಳಗೆ ನಡೆಸಲು ತೀರ್ಮಾನಿಸಲಾಗಿತ್ತು. ನಂತರ 2021ಕ್ಕೆ ಮುಂದೂಡಲಾಗಿತ್ತು.

ಕುವೈತ್‌ನಲ್ಲಿ ನಡೆಯಬೇಕಿದ್ದ ಫ್ಯುಟ್ಸಾಲ್‌ ಚಾಂಪಿಯನ್‌ಷಿಪ್‌ ಹಾಗೂ ಥಾಯ್ಲೆಂಡ್‌ನಲ್ಲಿ ನಿಗದಿಯಾಗಿದ್ದ ಏಷ್ಯಾಕಪ್‌ ಫುಟ್‌ಬಾಲ್ ಟೂರ್ನಿಗಳನ್ನು ಎಎಫ್‌ಸಿ ರದ್ದು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.