ADVERTISEMENT

ಎಎಫ್‌ಸಿ ಅರ್ಹತಾ ಫುಟ್‌ಬಾಲ್‌ ಟೂರ್ನಿ: ಲಿಂಡಾ ಕೋಮ್‌ ‘ಹ್ಯಾಟ್ರಿಕ್‌’ ಗೋಲು

16 ವರ್ಷದೊಳಗಿನವರ ಎಎಫ್‌ಸಿ ಅರ್ಹತಾ ಫುಟ್‌ಬಾಲ್‌ ಟೂರ್ನಿ: ಹಾಂಕಾಂಗ್‌ ಎದುರು ಗೆದ್ದ ಭಾರತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 15:59 IST
Last Updated 15 ಸೆಪ್ಟೆಂಬರ್ 2018, 15:59 IST
ಸಿಲ್ಕಿ ದೇವಿ
ಸಿಲ್ಕಿ ದೇವಿ   

ನವದೆಹಲಿ: ಲಿಂಡಾ ಕೋಮ್‌ ಕಾಲ್ಚಳಕದಲ್ಲಿ ಅರಳಿದ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಭಾರತ ಮಹಿಳಾ ತಂಡದವರು ಮಂಗೋಲಿಯಾದ ಉಲ‍ನ್‌ ಬಾತರ್‌ನಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಎಎಫ್‌ಸಿ ಅರ್ಹತಾ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.‌

ಶನಿವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ಸಿಲ್ಕಿ ದೇವಿ ಸಾರಥ್ಯದ ಭಾರತ 6–1 ಗೋಲುಗಳಿಂದ ಹಾಂಕಾಂಗ್‌ ಎದುರು ಗೆದ್ದಿತು.

ಹೋದ ತಿಂಗಳು ಭೂತಾನ್‌ನಲ್ಲಿ ನಡೆದಿದ್ದ 15 ವರ್ಷದೊಳಗಿನವರ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತದ ವನಿತೆಯರು ಹಾಂಕಾಂಗ್‌ ಎದುರಿನ ಹಣಾಹಣಿಯಲ್ಲಿ ಪ್ರಾಬಲ್ಯ ಮೆರೆದರು.

ADVERTISEMENT

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡ 23ನೇ ನಿಮಿಷದಲ್ಲಿ ಖಾತೆ ತೆರೆಯಿತು. ಸುನಿತಾ ಮುಂಡಾ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

35ನೇ ನಿಮಿಷದಲ್ಲಿ ಸಿಲ್ಕಿ ದೇವಿ ಗೋಲು ದಾಖಲಿಸಿದರು. ಇದರ ಬೆನ್ನಲ್ಲೇ ಲಿಂಡಾ ಕಾಲ್ಚಳಕ ತೋರಿದರು. ಹೀಗಾಗಿ ಭಾರತ ತಂಡ 3–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಸಿಲ್ಕಿ ದೇವಿ ಬಳಗದ ಆಟ ರಂಗೇರಿತು. 50ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಸಿಲ್ಕಿ ಚೆಂಡನ್ನು ಗುರಿ ತಲುಪಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

73ನೇ ನಿಮಿಷದಲ್ಲಿ ಲಿಂಡಾ ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು. ಅವೇಕಾ ಸಿಂಗ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಚುರುಕಾಗಿ ನಿಯಂತ್ರಣಕ್ಕೆ ಪಡೆದ ಲಿಂಡಾ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿದರು. ಹೀಗಾಗಿ ತಂಡದ ಮುನ್ನಡೆ 5–0ಗೆ ಹೆಚ್ಚಿತು.

86ನೇ ನಿಮಿಷದಲ್ಲಿ ಹಾಂಕಾಂಗ್‌ ತಂಡದ ಆಟಗಾರ್ತಿ ಗೋಲು ದಾಖಲಿಸಿ ಹಿನ್ನಡೆ ತಗ್ಗಿಸಿದರು. ಪಂದ್ಯ ಮುಗಿಯಲು ಕೆಲ ನಿಮಿಷಗಳು ಬಾಕಿ ಇದ್ದಾಗ ಗೋಲು ದಾಖಲಿಸಿದ ಲಿಂಡಾ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು.

ಸೆಪ್ಟೆಂಬರ್‌ 19ರಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ನಂತರದ ಪಂದ್ಯಗಳಲ್ಲಿ ಭಾರತಕ್ಕೆ ಮಂಗೋಲಿಯಾ (ಸೆ.21) ಮತ್ತು ಲಾವೊಸ್‌ (ಸೆ.23) ಸವಾಲು ಎದುರಾಗಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಗಳಿಸುವ ತಂಡ ಮುಂದಿನ ವರ್ಷ ನಡೆಯುವ ಎಎಫ್‌ಸಿ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಗಳಿಸಲಿದೆ. ಹೀಗಾಗಿ ಭಾರತಕ್ಕೆ ಈ ಮೂರು ಪಂದ್ಯಗಳೂ ಮಹತ್ವದ್ದೆನಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.