ನವದೆಹಲಿ: ‘ಎಐಎಫ್‌ಎಫ್ ಮೇಲೆ ಅಮಾನತು ಇದ್ದರೂ ಗೋಕುಲಂ ಕೇರಳ ಮತ್ತು ಎಟಿಕೆ ಮೋಹನ್ ಬಾಗನ್ ಕ್ಲಬ್‌ಗಳಿಗೆ ಮುಂಬರುವ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಬೇಕು’ ಎಂದು ಕೇಂದ್ರ ಕ್ರೀಡಾ ಸಚಿವಾಲಯವು ಫುಟ್‌ಬಾಲ್ ಸಂಸ್ಥೆಗಳ ಅಂತರರಾಷ್ಟ್ರೀಯ ಒಕ್ಕೂಟ (ಫಿಫಾ) ಹಾಗೂ ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್‌ಗೆ (ಎಎಫ್‌ಸಿ) ಮನವಿ ಮಾಡಿದೆ.
ಗೋಕುಲಂ ಕೇರಳ ತಂಡ ಎಎಫ್‌ಸಿ ಮಹಿಳಾ ಕ್ಲಬ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಉಜ್ಬೆಕಿಸ್ತಾನದಲ್ಲಿದೆ. ಈ ತಂಡ ಮೊದಲ ಪಂದ್ಯದಲ್ಲಿ ಆ.23 ರಂದು ಇರಾನ್‌ನ ಕ್ಲಬ್‌ಅನ್ನು ಎದುರಿಸಲಿದೆ. ಆದರೆ ಎಐಎಫ್‌ಎಫ್ ಅಮಾನತು ಆಗಿರುವುದರಿಂದ ಈ ತಂಡಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇನ್ನೂ ಎಎಫ್‌ಸಿ ಅನುಮತಿ ನೀಡಿಲ್ಲ.
ಮೋಹನ್ ಬಾಗನ್ ತಂಡ ಸೆ.7 ರಿಂದ ಬಹರೇನ್‌ನಲ್ಲಿ ನಡೆಯುವ ಎಎಫ್‌ಸಿ ಕ್ಲಬ್ ಅಂತರ ವಲಯ ಸೆಮಿಫೈನಲ್ಸ್‌ನಲ್ಲಿ ಆಡಲಿದೆ.
‘ಫಿಫಾ ಅಮಾನತು ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನವೇ ಗೋಕುಲಂ ಕೇರಳ ತಂಡ ಉಜ್ಬೆಕಿಸ್ತಾನಕ್ಕೆ ಪ್ರಯಾಣಿಸಿತ್ತು. ಯುವ ಆಟಗಾರ್ತಿಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಎಎಫ್‌ಸಿ ಮಹಿಳಾ ಕ್ಲಬ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಅವಕಾಶ ನೀಡಬೇಕು’ ಎಂದು ಫಿಫಾ ಮತ್ತು ಎಎಫ್‌ಸಿಗೆ ಇ–ಮೇಲ್ ಮೂಲಕ ಸಚಿವಾಲಯ ಮನವಿ ಮಾಡಿದೆ.
‘ಉಜ್ಬೆಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದು, ಗೋಕುಲಂ ತಂಡದ ಸದಸ್ಯರಿಗೆ ಎಲ್ಲ ನೆರವು ನೀಡುವಂತೆ ಸೂಚಿಸಿದ್ದೇವೆ. ಕ್ಲಬ್‌ನ ಆಡಳಿತ ಮಂಡಳಿ ಜತೆಯೂ ಸಂಪರ್ಕದಲ್ಲಿದ್ದೇವೆ’ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.
‘ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ’ದ ಕಾರಣ ನೀಡಿ ಫಿಫಾ, ಆ.16 ರಂದು ಭಾರತ ಫುಟ್‌ಬಾಲ್ ಫೆಡರೇಷನ್ಅನ್ನು (ಎಐಎಫ್‌ಎಫ್) ಅಮಾನತು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.