ADVERTISEMENT

ಜೂನಿಯರ್ ಫುಟ್‌ಬಾಲ್‌ ಟೂರ್ನಿಗೆ ಡಾ.ಆವೊ ಹೆಸರು

ಪಿಟಿಐ
Published 18 ಸೆಪ್ಟೆಂಬರ್ 2024, 13:55 IST
Last Updated 18 ಸೆಪ್ಟೆಂಬರ್ 2024, 13:55 IST
ಫುಟ್‌ಬಾಲ್‌
ಫುಟ್‌ಬಾಲ್‌   

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತ ಫುಟ್‌ಬಾಲ್‌ ತಂಡದ ಮೊದಲ ನಾಯಕರಾಗಿದ್ದ ಡಾ.ತಾಲಿಮೆರೆನ್ ಆವೊ ಅವರ ಕೊಡುಗೆಯನ್ನು ಸ್ಮರಿಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌, ಬಾಲಕಿಯರ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅವರ ಹೆಸರನ್ನು ಇಡಲು ನಿರ್ಧರಿಸಿದೆ.

2025–26ರ ಸಾಲಿನಿಂದ ಈ ಟೂರ್ನಿಯನ್ನು ‘ಡಾ.ತಾಲಿಮೆರೆನ್‌ ಆವೊ ಜೂನಿಯರ್‌ ಬಾಲಕಿಯರ ರಾಷ್ಟ್ರೀಯ  ಫುಟ್‌ಬಾಲ್ ಚಾಂಪಿಯನ್‌ಷಿಪ್‌’ ಎಂದು ಕರೆಯಲಾಗುವುದೆಂದು ಎಐಎಫ್‌ಎಫ್‌ ಹೇಳಿದೆ.

18ನೇ ವರ್ಷ ಕಾಣುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಮಣಿಪುರ ಪ್ರಾಬಲ್ಯ ಸಾಧಿಸಿದ್ದು 11 ಬಾರಿ ಚಾಂಪಿಯನ್ ಆಗಿದ್ದು, ಎರಡು ಬಾರಿ ರನ್ನರ್ ಅಪ್ ಆಗಿದೆ.

ADVERTISEMENT

ಇದಲ್ಲದೇ, ಡಾ.ಆವೊ ಅವರ ಆತ್ಮಕಥನವನ್ನು ಹೊರತರಲೂ ಎಐಎಫ್‌ಎಫ್‌ ಮುಂದಾಗಿದೆ. ನಾಗಾಲ್ಯಾಂಡ್‌ನ ಚಾಂಗ್‌ಕಿ ಹೆಸರಿನ ಗ್ರಾಮದಲ್ಲಿ 1918ರಲ್ಲಿ ಜನಿಸಿ, ಫುಟ್‌ಬಾಲ್‌ ತಾರೆಯಾಗಿ ಸಾಗಿದ ಹಾದಿಯನ್ನು ಇದರಲ್ಲಿ ವಿವರವಾಗಿ ನೀಡಲಾಗುವುದು. ಅದರಲ್ಲಿ, 1948ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದೂ ಸೇರಿದಂತೆ ಅವರ ಗಮನಾರ್ಹ ಸಾಧನೆಗಳ ನೋಟವೂ ಇರಲಿದೆ.

ಅರ್ಸೆನಲ್‌ ಎಫ್‌ಸಿ ಸೇರಿದಂತೆ ಇಂಗ್ಲೆಂಡ್‌ನ ಪ್ರತಿಷ್ಠಿತ ಕ್ಲಬ್‌ಗಳಿಂದ ಲೀಗ್‌ನಲ್ಲಿ ಆಡಲು ಅವರಿಗೆ ಆಹ್ವಾನ ಬಂದಿದ್ದವು ಎಂದೂ ಹೇಳಲಾಗುತ್ತಿದೆ. ಆದರೆ ವೈದ್ಯರಾಗಬೇಕೆಂಬ ತಂದೆಯ ಬಯಕೆಯನ್ನು ಈಡೇರಿಸಲು ಅವರು ಆಹ್ವಾನ ನಿರಾಕರಿಸಿ, ವೈದ್ಯಕೀಯ ವ್ಯಾಸಂಗ ಮುಂದುವರಿಸಿದ್ದರು. ನಂತರ ನಾಗಾಲ್ಯಾಂಡ್‌ನ ವೈದ್ಯಕೀಯ ಸೇವೆಗಳ ನಿರ್ದೇಶಕರಾದರು.

ಅವರು 1948ರ ಒಲಿಂಪಿಕ್ಸ್‌ನಲ್ಲಿ ದೇಶದ ಧ್ವಜಧಾರಿಯೂ ಆಗಿದ್ದರು. ಅವರು ಮೋಹನ್‌ ಬಾಗನ್ ಕ್ಲಬ್‌ಗೆ ಆಡಿದ್ದರು.

‘ಡಾ.ತಾಲಿಮೆರೆನ್‌ ಆವೊ ಅವರದು ಸ್ಫೂರ್ತಿಯುತ ವ್ಯಕ್ತಿತ್ವ. ಈಗಿನ ಸನ್ನಿವೇಶದಲ್ಲಿ ಅವರ ಸಾಧನೆಯ ಪಯಣ ಗೊತ್ತಾಗಬೇಕಿದೆ. ಇಲ್ಲವಾದರಲ್ಲಿ ಬರುವ ತಲೆಮಾರುಗಳು ಅವರನ್ನು ಮರೆತೇ ಬಿಡುವ ಆತಂಕವಿದೆ’ ಎಂದು ಫೆಡರೇಷನ್ ಅಧ್ಯಕ್ಷ ಕಲ್ಯಾಣ್‌ ಚೌಬೆ ಹೇಳಿದರು.

ಎಐಎಫ್‌ಎಫ್ ಈ ಹಿಂದೆ ಸೀನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜಮಾತಾ ಜೀಜಾಬಾಯಿ ಅವರ ಹೆಸರನ್ನಿಟ್ಟಿತ್ತು. 20 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ವಿಜೇತರಿಗೆ ನೀಡುವ ಟ್ರೋಫಿಗೆ ಸ್ವಾಮಿ ವಿವೇಕಾನಂದ ಕಪ್ ಎಂದು ನಾಮಕರಣ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.