ADVERTISEMENT

AIFF ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಇಗೊರ್‌ ಸ್ಟಿಮಾಚ್‌ ವಜಾ

ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ನಿರಾಸೆ

ಪಿಟಿಐ
Published 17 ಜೂನ್ 2024, 15:49 IST
Last Updated 17 ಜೂನ್ 2024, 15:49 IST
ಇಗೊರ್‌ ಸ್ಟಿಮ್ಯಾಚ್
ಇಗೊರ್‌ ಸ್ಟಿಮ್ಯಾಚ್   

ನವದೆಹಲಿ: ಇಗೊರ್‌ ಸ್ಟಿಮಾಚ್‌ ಅವರನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಸ್‌ಎಫ್‌), ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ತೆಗೆದುಹಾಕಿದೆ. ಫಿಫಾ ವಿಶ್ವಕಪ್‌ ಕ್ವಾಲಿಫೈಯರ್ಸ್‌ನಲ್ಲಿ ತಂಡದ ನಿರಾಶಾದಾಯಕ ನಿರ್ವಹಣೆಯಿಂದಾಗಿ ಅವರ ತಲೆದಂಡ ಆಗಿದೆ.

56 ವರ್ಷ ವಯಸ್ಸಿನ ಸ್ಟಿಮಾಚ್‌ ಅವರನ್ನು 2019ರಲ್ಲಿ ರಾಷ್ಟ್ರೀಯ ತಂಡದ ಹೆಡ್‌ ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಕ್ರೊವೇಷಿಯಾದ ಮಾಜಿ ಆಟಗಾರರಾಗಿದ್ದ ಅವರ ಅವಧಿಯನ್ನು ಕಳೆದ ವರ್ಷ ವಿಸ್ತರಿಸಲಾಗಿತ್ತು.

ಎರಡನೇ ಸುತ್ತಿನ ಕೊನೆಯ ಲೀಗ್ ಪಂದ್ಯದಲ್ಲಿ ಇತ್ತೀಚೆಗೆ ಕತಾರ್ ಎದುರು 1–2ರಲ್ಲಿ ಸೋತ ನಂತರ ಭಾರತ ತಂಡ ಕ್ವಾಲಿಫೈಯರ್ಸ್‌ನ ಮೂರನೇ ಸುತ್ತಿಗೇರಲು ವಿಫಲವಾಗಿತ್ತು.

ADVERTISEMENT

‘2026ರ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಸೀನಿಯರ್ ಪುರುಷರ ತಂಡದ ನಿರಾಶಾದಾಯಕ ಆಟದ ನಂತರ, ತಂಡವನ್ನು ಮುನ್ನಡೆಸುವುದಕ್ಕೆ  ಹೊಸ ಹೆಡ್‌ ಕೋಚ್‌ ನೇಮಕಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು’ ಎಂದು ಎಐಎಫ್‌ಎಫ್‌ ಹೇಳಿಕೆಯಲ್ಲಿ ತಿಳಿಸಿದೆ. ಸ್ಟಿಮಾಚ್‌ ಅವರಿಗಿಂತ ಮೊದಲು ಭಾರತ ತಂಡಕ್ಕೆ ಸ್ಟೀಫನ್ ಕಾನ್‌ಸ್ಟಂಟೇನ್ ಕೋಚ್ ಆಗಿದ್ದರು.

1998ರ ವಿಶ್ವಕಪ್‌ನ ಸೆಮಿಫೈನಲ್ ತಲುಪಿದ್ದ ಕ್ರೊವೇಷಿಯಾ ತಂಡದಲ್ಲಿ ಸ್ಟಿಮಾಚ್‌ ಆಡಿದ್ದರು.

ಸ್ಟಿಮಾಚ್‌ ಮಾರ್ಗದರ್ಶನದಡಿ ಭಾರತ ಎರಡು ಸ್ಯಾಫ್‌ ಚಾಂಪಿಯನ್‌ಷಿಪ್‌, ಒಮ್ಮೆ ಇಂಟರ್‌ಕಾಂಟಿನೆಂಟಲ್ ಕಪ್ ಮತ್ತು ಮೂರು ರಾಷ್ಟ್ರಗಳ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.