ADVERTISEMENT

ಫಿಫಾ ಕ್ವಾಲಿಫೈರ್‌: ಬ್ರೆಜಿಲ್ ಮಣಿಸಿದ ಅರ್ಜೆಂಟೀನಾ

ಏಜೆನ್ಸೀಸ್
Published 22 ನವೆಂಬರ್ 2023, 16:01 IST
Last Updated 22 ನವೆಂಬರ್ 2023, 16:01 IST
   

ರಿಯೊ ಡಿ ಜನೈರೊ: ಹಿರಿಯ ಡಿಫೆಂಡರ್‌ ನಿಕೊಲಸ್‌ ಒಟಮೆಂಡಿ ಗಳಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್ ಕ್ವಾಲಿಫೈರ್‌ ಪಂದ್ಯದಲ್ಲಿ 1–0 ಗೋಲಿನಿಂದ ‘ಬದ್ಧ ಎದುರಾಳಿ’ ಬ್ರೆಜಿಲ್‌ ತಂಡವನ್ನು ಮಣಿಸಿತು.

ಮರಕಾನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದ 63ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಾಯಿತು. ಕಳೆದ ವಾರ ಉರುಗ್ವೆ ಕೈಯಲ್ಲಿ ಸೋತಿದ್ದ ವಿಶ್ವಚಾಂಪಿಯನ್ನರು ಪುಟಿದೆದ್ದು ನಿಲ್ಲುವಲ್ಲಿ ಯಶಸ್ವಿಯಾದರು.

ಈ ಗೆಲವಿನ ಮೂಲಕ ಅರ್ಜೆಂಟೀನಾ ತಂಡ ಒಟ್ಟು 15 ಪಾಯಿಂಟ್ಸ್‌ಗಳೊಂದಿಗೆ ದಕ್ಷಿಣ ಅಮೆರಿಕ ವಲಯದ ಕ್ವಾಲಿಫೈರ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳನ್ನು ಆಡಿರುವ ಬ್ರೆಜಿಲ್‌ ಏಳು ಪಾಯಿಂಟ್ಸ್‌ಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ತಂಡಕ್ಕೆ ಎದುರಾದ ಮೂರನೇ ಸೋಲು ಇದು.

ADVERTISEMENT

ಪ್ರೇಕ್ಷಕರ ಹೊಡೆದಾಟ: ಪಂದ್ಯದ ಆರಂಭಕ್ಕೂ ಮುನ್ನ ಬ್ರೆಜಿಲ್‌ ಮತ್ತು ಅರ್ಜೆಂಟೀನಾ ತಂಡಗಳ ಅಭಿಮಾನಿಗಳ ಮಧ್ಯೆ ಹೊಡೆದಾಟ ನಡೆಯಿತು. ಇದರಿಂದ ಪಂದ್ಯ 30 ನಿಮಿಷ ತಡವಾಗಿ ಆರಂಭವಾಯಿತು. ಬ್ರೆಜಿಲ್‌ ಪೊಲೀಸರು ಅರ್ಜೆಂಟೀನಾ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದು ಕಂಡುಬಂತು. ಲಯೊನೆಲ್‌ ಮೆಸ್ಸಿ ಒಳಗೊಂಡಂತೆ ಅರ್ಜೆಂಟೀನಾ ಆಟಗಾರರು ಅಭಿಮಾನಿಗಳಲ್ಲಿ ಶಾಂತವಾಗಿರುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.