ADVERTISEMENT

ಮೆಸ್ಸಿಗೆ ಅಗ್ನಿ ಪರೀಕ್ಷೆ; ಕ್ರೊವೇಷ್ಯಾಗೆ ಭರವಸೆ

ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ ಕ್ರೊವೇಷ್ಯಾ ತಂಡಕ್ಕೆ 16ರ ಘಟ್ಟ ತಲುಪುವ ನಿರೀಕ್ಷೆ

ಏಜೆನ್ಸೀಸ್
Published 20 ಜೂನ್ 2018, 18:29 IST
Last Updated 20 ಜೂನ್ 2018, 18:29 IST
ಲಯೊನೆಲ್ ಮೆಸ್ಸಿ
ಲಯೊನೆಲ್ ಮೆಸ್ಸಿ   

ನಿಜ್ನಿ ನೊವ್‌ಗೊರೋದ್‌: ಫುಟ್‌ಬಾಲ್‌ ಶಿಶುಗಳು ಎಂದೇ ಪರಿಗಣಿಸಲಾಗುವ ಐಸ್‌ಲ್ಯಾಂಡ್‌ ತಂಡದ ಹೋರಾಟಕ್ಕೆ ಬೆಚ್ಚಿ ಬಿದ್ದಿರುವ ಅರ್ಜೆಂಟೀನಾ ವಿಶ್ವಕಪ್‌ನ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ.

ಮೊದಲ ಪಂದ್ಯದಲ್ಲಿ ಐಸ್‌ಲ್ಯಾಂಡ್‌ ವಿರುದ್ಧ 1–1ರ ಸಮಬಲ ಸಾಧಿಸಿರುವ ಈ ತಂಡ ಗುರುವಾರ ನಡೆಯಲಿರುವ ಡಿ ಗುಂಪಿನ ಪಂದ್ಯದಲ್ಲಿ ಕ್ರೊವೇಷ್ಯಾವನ್ನು ಎದುರಿಸಲಿದೆ. ನೈಜೀರಿಯಾವನ್ನು 2–0ಯಿಂದ ಮಣಿಸಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಕ್ರೊವೇಷ್ಯಾ ಪ್ರಿ ಕ್ವಾರ್ಟರ್ ಫೈನಲ್ ಹಂತದ ಕನಸು ಹೊತ್ತು ಗುರುವಾರ ಅಂಗಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಅದು ನೇರವಾಗಿ 16ರ ಘಟ್ಟ ಪ್ರವೇಶಿಸಲಿದೆ.

ಅರ್ಜೆಂಟೀನಾ ತಂಡವು ನಾಯಕ ಲಯೊನೆಲ್ ಮೆಸ್ಸಿ ಅವರ ಮೇಲೆ ಅವಲಂಬಿತವಾಗಿದೆ. ಆದರೆ ಮೊದಲ ಪಂದ್ಯದಲ್ಲಿ ಅವರಿಗೆ ಮಿಂಚಲು ಆಗಲಿಲ್ಲ. ಪೆನಾಲ್ಟಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದ ಅವರು ಗುರುವಾರ ತಮ್ಮ ನೈಜ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

ADVERTISEMENT

ಕಳೆದ ಬಾರಿ ಬ್ರೆಜಿಲ್‌ನಲ್ಲಿ ಫೈನಲ್ ಫೈನಲ್ ತಲುಪಿದ್ದ ಅರ್ಜೆಂಟೀನಾ ಈ ಬಾರಿ ಆರಂಭದಲ್ಲೇ ಮುಗ್ಗರಿಸಿದೆ. ಆದ್ದರಿಂದ ಮುಂದಿನ ಹಾದಿ ಕಠಿಣವಾಗಿದ್ದು ಗುರುವಾರವೂ ಗೆಲ್ಲಲು ವಿಫಲವಾದರೆ ಭಾರಿ ನಿರಾಸೆಗೆ ಒಳಗಾಗಲಿದೆ. 2002ರಲ್ಲಿ ಈ ತಂಡ ನಾಕೌಟ್ ಹಂತಕ್ಕೆ ಏರಲಾಗದೆ ಮರಳಿತ್ತು. ಅಂಥ ಫಲಿತಾಂಶ ಮರುಕಳಿಸದೇ ಇರಲು ಗುರುವಾರ ಕಠಿಣ ಪ್ರಯತ್ನ ನಡೆಸಲಿದೆ.

ಐಸ್‌ಲ್ಯಾಂಡ್‌ ಎದುರಿನ ಪಂದ್ಯದ ಫಲಿತಾಂಶದ ಕುರಿತು ಫುಟ್‌ಬಾಲ್‌ ದಂತಕತೆ ಡೀಗೊ ಮರಡೋನಾ ಅವರು ಬೇಸರ ವ್ಯಕ್ತಪಡಿಸಿದ್ದು ಮುಂದಿನ ಪಂದ್ಯದಲ್ಲೂ ತಂಡ ಇದೇ ರೀತಿ ಆಡಿದರೆ ಕೋಚ್‌ ಜಾರ್ಜ್‌ ಸಂಪೋಳಿ ಅವರನ್ನು ಅರ್ಜೆಂಟೀನಾಗೆ ಮರಳಲು ಫುಟ್‌ಬಾಲ್ ಪ್ರೇಮಿಗಳು ಬಿಡಲಾರರು ಎಂದು ಎಚ್ಚರಿಸಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರೂ ತಂಡದ ಸಾಮರ್ಥ್ಯ ಕುಗ್ಗಲಿಲ್ಲ ಎಂದು ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಪಂದ್ಯದಲ್ಲಿ ಮಿಂಚಲು ವಿಫಲರಾದ ಮೆಸ್ಸಿ ಮುಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಲಿದ್ದಾರೆ ಎಂದು ಡೆಫೆಂಡರ್‌ ಕ್ರಿಸ್ಟಿಯನ್‌ ಸನ್ಸಾಲ್ದಿ ಹೇಳಿದ್ದಾರೆ.

ನೋವು ಮರೆತು ಆಡಿದ್ದ ಕ್ರೊವೇಷ್ಯಾ: ನಾಯಕ ಲೂಕಾ ಮಾಡ್ರಿಕ್‌ ಅವರು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ಸುಳ್ಳು ಹೇಳಿದ ಕಾರಣ ಅವಮಾನಕ್ಕೆ ಒಳಗಾಗಿದ್ದ ಕ್ರೊವೇಷ್ಯಾ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿ ಆ ನೋವನ್ನು ಮರೆತಿತ್ತು. ಎರಡನೇ ಪಂದ್ಯಕ್ಕೆ ಸಜ್ಜಾಗಿರುವ ತಂಡವು ಸ್ಟ್ರೈಕರ್‌ ನಿಕೋಲಾ ಕಾಲಿನಿಕ್ ಗಾಯಗೊಂಡು ಸ್ವದೇಶಕ್ಕೆ ಮರಳಿರುವ ಕಾರಣ ಹಿನ್ನಡೆ ಅನುಭವಿಸಿದೆ. ಆದರೂ ಉತ್ತಮ ಸಾಮರ್ಥ್ಯದ ಭರವಸೆ ಹೊಂದಿದೆ.

*
ತಂಡದ ಪ್ರತಿ ಆಟಗಾರನೂ ಮೆಸ್ಸಿಗೆ ಮಾನಸಿಕ ಧೈರ್ಯ ತುಂಬಿದ್ದಾರೆ. ಮಹತ್ವದ ಪಂದ್ಯದಲ್ಲಿ ಹೇಗೆ ಆಡಬೇಕು ಎಂಬುದು ಮೆಸ್ಸಿಗೆ ತಿಳಿದಿದೆ.
–ಪೌಲೊ ಡೌಬಾಲ,
ಅರ್ಜೆಂಟೀನಾದ ಸ್ಟ್ರೈಕರ್‌

*


*


*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.