ಅರ್ಜೆಂಟಿನಾ:ಫುಟ್ಬಾಲ್ ದಂತಕತೆ ಡಿಯಾಗೊ ಮರಡೊನಾ ಅವರದ್ದು ಸಹಜ ಸಾವಲ್ಲ. ವೈದ್ಯರೇ ನಿರ್ಲಕ್ಷ್ಯದಿಂದ ಹತ್ಯೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ತನಿಖೆಗೆ ಒಳಪಟ್ಟಿರುವ ಆರೋಪಿ ನರ್ಸ್ ಡಹಿಯಾನ ಗಿಸೆಲಾ ಮ್ಯಾಡ್ರಿಡ್ ಪರ ವಕೀಲ ರುಡಾಲ್ಫೊ ಬೆಕ್, ಕೋರ್ಟ್‌ನಲ್ಲಿ ವಿಚಾರಣೆ ಸಂದರ್ಭ 'ಅವರು ಡಿಯೊಗೊ ಹತ್ಯೆ ಮಾಡಿದ್ದಾರೆ' ಎಂದಿದ್ದು ಕೋಲಾಹಲಕ್ಕೆ ಕಾರಣವಾಗಿದೆ.
ಮರಡೊನಾ ಹೃದಯಾಘಾತದಿಂದ ಕಳೆದ ನವೆಂಬರ್‌ನಲ್ಲಿ ಸಾವಿಗೀಡಾಗಿದ್ದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ಬಳಲುತ್ತಿದ್ದ ಮರಡೊನಾ ಆಸ್ಪತ್ರೆಗೆ ದಾಖಲಾದ ಒಂದು ವಾರದ ಬಳಿಕ ಸಾವು ಸಂಭವಿಸಿತ್ತು.
ಮರಡೊನಾ ಸಾವಿಗೆ ಸಂಬಂಧಿಸಿದ ವಿಚಾರಣೆಗೆ ಒಳಪಟ್ಟಿರುವ ಏಳು ಮಂದಿ ಪೈಕಿ 36 ವರ್ಷದ ನರ್ಸ್ ಮ್ಯಾಡ್ರಿಡ್ ಒಬ್ಬರಾಗಿದ್ದಾರೆ. ಆಸ್ಪತ್ರೆಯಲ್ಲಿ ಅಸಮರ್ಪಕ ಆರೈಕೆಯಿಂದ ಮರಡೊನಾ ಸಾವು ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ.
ಮರಡೊನಾಗೆ ಚಿಕಿತ್ಸೆ ನೀಡಿದ್ದು ವೈದ್ಯರು. ಅದಕ್ಕಾಗಿ ತಮ್ಮ ಕಕ್ಷಿದಾರರ ಮೇಲೆ ಕೊಲೆ ಆರೋಪ ಹೊರಿಸಬಾರದು. ಹೃದಯಕ್ಕೆ ಸಂಬಂಧಿಸಿ ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಚಿಕಿತ್ಸೆ ನೀಡಲಾಗಿದೆ. ಇದರಿಂದ ಹೃದಯದ ಏರಿಳಿತ ಹೆಚ್ಚಾಗಿದೆ ಎಂದು ವಕೀಲ ಬೆಕ್ ಕೋರ್ಟ್‌ನಲ್ಲಿ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಮರಡೊನಾ ಕುಸಿದು ಬಿದ್ದಿದ್ದಾರೆ. ಸಿಎಟಿ ಸ್ಕ್ಯಾನ್ ಮಾಡಲಾಗಿದೆಯೇ ಎಂದು ನರ್ಸ್ ಮ್ಯಾಡ್ರಿಡ್ ಅವರನ್ನು ವೈದ್ಯರು ಕೇಳಿದ ಸಂದರ್ಭ, ಹೊರಗೆ ಮಾಧ್ಯಮಕ್ಕೆ ಗೊತ್ತಾದರೆ ಕಷ್ಟವಾಗುತ್ತದೆ ಎಂದು ಕೂಗಾಡಿರುವುದಾಗಿ ವಕೀಲ ಬೆಕ್ ಕೋರ್ಟ್ ಗಮನಕ್ಕೆ ತಂದಿದ್ದಾರೆ.
'ಮರಡೊನಾ ಅವರಿಗೆ ಸಾವು ಸಮೀಪಿಸಿದ ಬಗ್ಗೆ ಹಲವು ಎಚ್ಚರಿಕೆಗಳು ಕಂಡುಬಂದರೂ ಅದನ್ನು ವೈದ್ಯರು ನಿರ್ಲಕ್ಷಿಸಿದ್ದಾರೆ' ಎಂಬುದನ್ನು 8 ಗಂಟೆಗಳಿಗೂ ಹೆಚ್ಚು ಕಾಲ ನಡೆದ ನರ್ಸ್ ಮ್ಯಾಡ್ರಿಡ್ ವಿಚಾರಣೆ ವೇಳೆ ಹೇಳಿರುವುದಾಗಿ ಎಂದು ಬೆಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.