ಹಾಂಗ್‌ಕಾಂಗ್: ಇಲ್ಲಿನ ಕ್ರೀಡಾಂಗಣದಲ್ಲಿ ಕಳೆದ ಭಾನುವಾರ ಏರ್ಪಡಿಸಿದ್ದ ಫುಟ್‌ಬಾಲ್ ಪ್ರದರ್ಶನ ಪಂದ್ಯದಲ್ಲಿ ಅರ್ಜೇಂಟಿನಾ ತಂಡದ ದಿಗ್ಗಜ ಲಯೊನೆಲ್ ಮೆಸ್ಸಿ ಆಡದೇ ಇದ್ದ ಕಾರಣ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಿಸಿ ತಟ್ಟಿದ ಪಂದ್ಯದ ಸಂಘಟಕರು ಟಿಕೆಟ್ ಮೌಲ್ಯದ ಶೇಕಡ 50ರಷ್ಟು ಹಣ ಹಿಂತಿರುಗಿಸಲು ಸಿದ್ಧವಿರುವುದಾಗಿ ತಿಳಿಸಿದೆ.
ಸ್ಥಳೀಯ ತಂಡದ ಎದುರು ನಡೆದ ಈ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಮೆಸ್ಸಿ 90 ನಿಮಿಷ ಬೆಂಚ್‌ನಲ್ಲಿಯೇ ಕುಳಿತಿದ್ದರು. ಆದರೆ, ಬುಧವಾರ ಇಂಟರ್ ಮಿಯಾಮಿ ಟೊಕಿಯೊದಲ್ಲಿ ಏರ್ಪಡಿಸಿದ್ದ ಪ್ರದರ್ಶನ ಪಂದ್ಯದಲ್ಲಿ 30 ನಿಮಿಷ ಆಟವಾಡಿದ್ದರು. ಇದರಿಂದ ಅಭಿಮಾನಿಗಳು ಕುಪಿತಗೊಂಡಿದ್ದು ಹಾಂಗ್‌ಕಾಂಗ್‌ನಲ್ಲಿ ಆರಂಭವಾದ ಪ್ರತಿಭಟನೆ ನಂತರ ಚೀನಾಕ್ಕೂ ವ್ಯಾಪಿಸಿತು.
ಎರಡು ದಿನಗಳಿಂದ ಚೀನಾದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಸ್ಸಿ ಗೈರುಹಾಜರಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಸಹ ಸಂಪಾದಕೀಯದಲ್ಲಿ ಫುಟ್‌ಬಾಲ್ ತಾರೆಯ ಸುತ್ತಲಿನ ವಿವಾದದ ಪರಿಣಾಮವು ‘ಕ್ರೀಡಾ ಕ್ಷೇತ್ರವನ್ನು ಮೀರಿದೆ’ ಎಂದು ಹೇಳಿದೆ.
ಗಾಯಗೊಳ್ಳದ ಹೊರತು ಮೆಸ್ಸಿ ಒಪ್ಪಂದದ ಪ್ರಕಾರ 45 ನಿಮಿಷ ಆಡಬೇಕಿತ್ತು. ಆದರೆ ಅವರು ಆಡುವುದಿಲ್ಲವೆಂದು ಗೊತ್ತಾದ ಬಳಿಕ, ‘ಪ್ರೇಕ್ಷಕರನ್ನು ಉದ್ದೇಶಿಸಿ ಮೆಸ್ಸಿ ಅವರು ಮಾತನಾಡಬೇಕು’ ಎಂದು ಸಂಘಟಕರು ಇಂಟರ್ ಮಿಯಾಮಿ ತಂಡದ ಆಡಳಿತದ ಬೆನ್ನುಬಿದ್ದರು.
‘ಆದರೆ ಮೆಸ್ಸಿ ಮಾತನಾಡಲಿಲ್ಲ. ಫೆ. 7ರಂದು ಟೋಕಿಯೊದ ಪಂದ್ಯದಲ್ಲಿ ಅವರು 45 ನಿಮಿಷ ಆಡಿದ್ದು ಮತ್ತೊಮ್ಮೆ ಕಪಾಳಕ್ಕೆ ಹೊಡೆದಂತಾಗಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.
ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದರ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಹಣ ಮರುಪಾವತಿ ವ್ಯವಸ್ಥೆಯ ವಿವರಗಳನ್ನು ಮಾರ್ಚ್ ಮಧ್ಯದ ವೇಳೆಗೆ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
‘ಸಂಘಟಕರಾಗಿ ನಾವು ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಿಲ್ಲ ಮತ್ತು ಅದಕ್ಕಾಗಿಯೇ ಟಾಟ್ಲರ್ ಏಷ್ಯಾ ಅಧಿಕೃತ ಚಾನೆಲ್‌ಗಳಿಂದ ಪಂದ್ಯದ ದಿನದ ಟಿಕೆಟ್‌ಗಳನ್ನು ಖರೀದಿಸಿದ ಎಲ್ಲರಿಗೂ ಶೇಕಡ 50 ಮರುಪಾವತಿ ಮಾಡಲಿದೆ ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.