ಕೊರೊನಾ ಹಾವಳಿಯಿಂದಾಗಿ ಕ್ರೀಡಾಕ್ಷೇತ್ರದ ಮೇಲೆ ಆಗಿರುವ ಪರಿಣಾಮ ಅಷ್ಟಿಷ್ಟಲ್ಲ. ಎರಡೂವರೆ ತಿಂಗಳು ಸಂಪೂರ್ಣ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಈಗ ನಿಧಾನಕ್ಕೆ ಪುಟಿದೇಳುತ್ತಿದೆ. ಆದರೆ ಮೊದಲಿನಂತೆ ಯಾವುದೂ ಇಲ್ಲ. ಬದಲಾವಣೆ ಮತ್ತು ಇದಕ್ಕೆ ತಕ್ಕಂತೆ ತಂತ್ರಜ್ಞಾನದ ಬಳಕೆ ಈಗ ಕ್ರೀಡೆಗೆ ಅನಿವಾರ್ಯ ಆಗಿದೆ. ಅದು ಹೊಸ ಕ್ರೀಡಾಪಟುಗಳಿಗೆ ಹೊಸ ಹುರುಪನ್ನೂ ತುಂಬಿದೆ.
ಮ್ಯಾ ಡ್ರಿಡ್‌ನ ಕ್ಯಾಂಪ್ ನೌ ಕ್ರೀಡಾಂಗಣದಲ್ಲಿ ಕಳೆದ ವಾರ ನಡೆದ ಲಾಲಿಗಾ ಟೂರ್ನಿಯ ಬಾರ್ಸಿಲೋನಾ ಎಫ್‌ಸಿ-ಲೆಗೆನೀಸ್ನಡುವಿನ ಪಂದ್ಯದಲ್ಲಿ ಕಾಲ್ಚೆಂಡಾಟದ ಜಾದೂಗಾರ ಲಯೊನೆಲ್ಮೆಸ್ಸಿ ಮತ್ತೊಮ್ಮೆ ಸೊಬಗಿನ ಆಟವಾಡಿದರು. ಅವರ ಡ್ರಿಬ್ಲಿಂಗ್‌ನ ಸವಿ ಉಣ್ಣಲುಗ್ಯಾಲರಿಯಲ್ಲಿ ಪ್ರೇಕ್ಷಕರಿರಲಿಲ್ಲ. ಹೀಗಾಗಿ ಅಭಿಮಾನಿಗಳ ಪ್ರೋತ್ಸಾಹದ ಅಲೆಗೆ ನೇರವಾಗಿ ಮೈಯೊಡ್ಡಲು ಮೆಸ್ಸಿಗೂ ಸಾಧ್ಯವಾಗಲಿಲ್ಲ. ಆದರೂ ಫುಟ್‌ಬಾಲ್ ಪ್ರಿಯರು ಮೆಸ್ಸಿ ಆಟ ಸವಿದರು; ಪ್ರೇಕ್ಷಕರ ಬೆಂಬಲದಲ್ಲಿ ಮೆಸ್ಸಿಯೂ ಪುಳಕಗೊಂಡರು!
ಇದು ತಂತ್ರಜ್ಞಾನದ ಮಹಿಮೆ. ಕೊರೊನಾ ಹಾವಳಿಯಿಂದ ಕ್ರೀಡಾ ಚಟುವಟಿಕೆ ಮೇಲೆ ಆಗಿರುವ ದುಷ್ಪರಿಣಾಮಕ್ಕೆ ಮದ್ದು ಅರೆಯಲು ಈಗ ತಂತ್ರಜ್ಞಾನ ನೆರವಿಗೆ ಬಂದಿದೆ. ಸ್ಪೇನ್ ಮತ್ತು ಜರ್ಮನಿಯ ಅಗ್ರ ಫುಟ್‌ಬಾಲ್ ಲೀಗ್‌ಗಳಾದ ಲಾಲಿಗಾ ಮತ್ತು ಬಂಡೆಸ್‌ಲಿಗಾ ಟೂರ್ನಿಗಳಲ್ಲಿ ಬಳಕೆಯಾದಂತೆ ಇನ್ನೂ ಆರಂಭವಾಗಬೇಕಿರುವ ವಿವಿಧ ಕ್ರೀಡೆಗಳಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ. ಇದಕ್ಕೆ ಪೂರಕ ವೇದಿಕೆ ಈಗಾಗಲೇ ಸಜ್ಜಾಗಿದೆ. ಕೊರೊನಾ ಕಾಟವು ಅಂಗಣಗಳಲ್ಲಿ ಇನ್ನೂ ಅನೇಕ ಬದಲಾವಣೆಗಳು ಕಾಣುವಂತೆಯೂ ಮಾಡಿದೆ.
ಸಾಮಾನ್ಯವಾಗಿ ಅಂಗಣದ ರೋಮಾಂಚನ ವನ್ನು ಜನರು ಟಿವಿ ಪರದರೆಯಲ್ಲಿ ನೋಡಿ ಸಂಭ್ರಮಿಸುತ್ತಾರೆ. ಆದರೆ ಲಾಲಿಗಾ ಪಂದ್ಯದಲ್ಲಿ ಆಟಗಾರರು ಪ್ರೇಕ್ಷಕರನ್ನೇ ಬೃಹತ್ ಪರದೆಯಲ್ಲಿ ನೋಡಿನಲಿದರು. 99 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಗ್ಯಾಲರಿ ಭಣಗುಡುತ್ತಿರುವುದರಿಂದ ಬೇಸರಗೊಂಡಿದ್ದ ಆಯೋಜಕರು ಪ್ರೇಕ್ಷಕರು ಟಿವಿಯಲ್ಲಿ ಪಂದ್ಯ ನೋಡುತ್ತ ಸಂಭ್ರಮಿಸುತ್ತಿದ್ದ ವಿಡಿಯೊಗಳನ್ನು ತರಿಸಿಕೊಂಡು ಅಂಗಣದಲ್ಲಿ ಅಳವಡಿಸಿದ್ದ ಡಿಜಿಟಲ್ ಪರದೆ ಮೇಲೆ ಪ್ರದರ್ಶಿಸಿ ಆಟಗಾರರನ್ನು ಹುರಿದುಂಬಿಸಿದ್ದರು. ಕೊರೊನಾ ಹಾವಳಿಯಿಂದಾಗಿ ಸ್ಥಗಿತೊಗೊಂಡು ಈ ತಿಂಗಳ 12ರಂದು ಪುನರಾರಂಭಗೊಂಡ ಸ್ಪಾನಿಷ್ ಲೀಗ್ ಪಂದ್ಯಗಳನ್ನು ಟಿವಿ ಪರದೆಯಲ್ಲಿ ವೀಕ್ಷಿಸಿದವರ ಸಂಖ್ಯೆಮೊದಲ ಒಂದು ವಾರದಲ್ಲಿ ಶೇಕಡಾ 48 ಹೆಚ್ಚಳಗೊಂಡ ಸುದ್ದಿಯೂ ತಂತ್ರಜ್ಞಾನದ ಪ್ರಭಾವವನ್ನು ಸಾಬೀತು ಮಾಡಿತ್ತು.
ಇಲೆಕ್ಟ್ರಾನಿಕ್ ಲೈನ್ ಕಾಲಿಂಗ್ ಸೌಲಭ್ಯ
ಕೊರೊನಾ ಭೀತಿಯ ನಡುವೆಯೂ ಆಗಸ್ಟ್‌ನಲ್ಲಿ ಅಮೆರಿಕ ಓಪನ್ ಟೂರ್ನಿ ಆಯೋಜಿಸುವ ಉಮೇದು ವ್ಯಕ್ತವಾಗಿದೆ. ಟೂರ್ನಿ ನಡೆಯುವುದೇ ಆದರೆ, ಅಂಗಣದ ಅಂಚಿನಲ್ಲಿ ಚೆಂಡು ಪುಟಿಯುವುದನ್ನೇ ಎವೆ ಇಕ್ಕದೆ ಕಾಯುವ ಲೈನ್ ಜಡ್ಜ್‌ಗಳು ಈ ಬಾರಿ ಇರುವುದಿಲ್ಲ. ಚೆಂಡು ಅಂಗಣದಿಂದ ಹೊರಗೆ ಹೋದರೆ ಸೂಚನೆ ನೀಡಲು ಜಡ್ಜ್‌ಗಳ ಬದಲಿಗೆ ಇಲೆಕ್ಟ್ರಾನಿಕ್ ಲೈನ್ ಕಾಲಿಂಗ್ ವ್ಯವಸ್ಥೆ ಇರುತ್ತದೆ. ಆರ್ಥರ್ ಆ್ಯಶ್ ಮತ್ತು ಲೂಯಿಸ್ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣ ಹೊರತುಪಡಿಸಿ ಉಳಿದೆಲ್ಲ ಕಡೆಯಲ್ಲಿ ಇದು ಜಾರಿಗೆ ಬರಲಿದೆ.
ಟೆನಿಸ್ ಅಂಗಣಗಳಲ್ಲಿ ಇತರ ಕೆಲವು ಬದಲಾವಣೆಗಳೂ ಆಗಲಿವೆ. ಲಾಕರ್ ಕೊಠಡಿಗಳನ್ನು ಬಳಸಲು ಅವಕಾಶವಿಲ್ಲದ ಕಾರಣಕ್ರೀಡಾಪಟುಗಳು, ಆಡುವ ಪೋಷಾಕನ್ನು ಧರಿಸಿಕೊಂಡೇ ಕ್ರೀಡಾಂಗಣಕ್ಕೆ ಬರಬೇಕು. ಅಂಗಣದ ಹೊರಗೆ ಇರುವ ಕ್ರೀಡಾಪಟುಗಳು ಮತ್ತು ರೆಫರಿಗಳು ಮಾಸ್ಕ್ ಮತ್ತು ಕೈಗವಸು ಧರಿಸುವುದು ಕಡ್ಡಾಯ.
ಫುಟ್‌ಬಾಲ್ ಪಂದ್ಯಗಳಲ್ಲಿ ಹೆಚ್ಚು ಸಮಯ ವ್ಯಯ ಆಗದಂತೆ ಮಾಡುವುದಕ್ಕಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆ ಮಂಡಳಿ (ದಿ ಐಎಫ್‌ಎಬಿ) ಕೆಲವು ಮಾರ್ಗೋಪಾಯಗಳನ್ನು ಕಂಡುಕೊಂಡಿದೆ. ನಿಯಮ ಮೂರಕ್ಕೆ ತಾತ್ಕಾಲಿಕ ತಿದ್ದುಪಡಿ ಮಾಡಿದೆ. ಆರು ಬದಲಿ ಆಟಗಾರರ ಬದಲು ಐವರಿಗೆ ಮಾತ್ರ ಅವಕಾಶ ನೀಡುವುದು, ಮೂರು ಬಾರಿ ಮಾತ್ರ ಆಟಗಾರರನ್ನು ಬದಲಿಸಲು ಅನುಮತಿ ನೀಡುವುದು ಇದರ ಪ್ರಮುಖ ಭಾಗ. ಮಧ್ಯಂತರ ಅವಧಿಯಲ್ಲಿ ಚೆಂಡು ವೈರಾಣುಮುಕ್ತಗೊಳಿಸಲು ಮರೆಯುವಂತಿಲ್ಲ...!
ಟೆಸ್ಟ್ ಕ್ರಿಕೆಟ್‌ನಲ್ಲೂ ಸಬ್‌ಸ್ಟಿಟ್ಯೂಟ್...?
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯುವುದು ಖಚಿತವಾದ ಕೂಡಲೇ ಎದ್ದ ಮೊದಲ ಪ್ರಶ್ನೆ ಎಂದರೆ ಪಂದ್ಯದ ನಡುವೆ ಯಾರಿಗಾದರೂ ಕೋವಿಡ್ ಲಕ್ಷಣ ಕಂಡುಬಂದರೆ ಏನು ಮಾಡುವುದು ಎಂಬುದು. ಇದಕ್ಕೆ ಪರಿಹಾರ ಕಂಡುಕೊಂಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬದಲಿ ಆಟಗಾರರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಿದೆ. ಹೀಗೆ ಅಂಗಣಕ್ಕೆ ಯಾರಾದರೂ ಇಳಿದರೆ ಅವರನ್ನು ಕೋವಿಡ್ ಸಬ್‌ಸ್ಟಿಟ್ಯೂಟ್ ಎಂದು ಕರೆಯಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.