ADVERTISEMENT

ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿ: ಬೆಲ್ಜಿಯಂಗೆ ಮಣಿದ ರೊಮೇನಿಯಾ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:03 IST
Last Updated 23 ಜೂನ್ 2024, 16:03 IST
<div class="paragraphs"><p> ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಕಲೋನ್, ಜರ್ಮನಿ: ಯೋರಿ ಟೈಲೆಮ್ಯಾನ್ಸ್ ಮತ್ತು ಕೆವಿನ್ ಡಿ ಬ್ರೂಯ್ನೆ ಗಳಿಸಿದ ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡವು ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ 2–0ಯಿಂದ ರೊಮೇನಿಯಾ ತಂಡವನ್ನು ಮಣಿಸಿ, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಡೊಮೆನಿಕ್‌ ಟೆಡೆಸ್ಕೊ ನಾಯಕತ್ವದ ಬೆಲ್ಜಿಯಂ ತಂಡವು ಮೊದಲ ಪಂದ್ಯದಲ್ಲಿ 0–1ರಿಂದ ಸ್ಲೋವಾಕಿಯಾ ವಿರುದ್ಧ ಸೋತಿತ್ತು. ಎರಡನೇ ಪಂದ್ಯದಲ್ಲೂ ಪರಾಭವಗೊಂಡಿದ್ದರೆ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿತ್ತು. ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸಾಂಘಿಕ ಆಟ ಪ್ರದರ್ಶಿಸಿ, ಗೆಲುವಿನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ‌‌‌

ADVERTISEMENT

ತನ್ನ ಮೊದಲ ಪಂದ್ಯದಲ್ಲಿ 3–0 ಯಿಂದ ಉಕ್ರೇನ್‌ ತಂಡವನ್ನು ಹಿಮ್ಮೆಟ್ಟಿಸಿದ್ದ ರೊಮೇನಿಯಾ ತಂಡವು ಈ ಪಂದ್ಯದ ಸೋಲಿನ ಹೊರತಾಗಿಯೂ ಅಗ್ರಸ್ಥಾನದಲ್ಲಿದೆ. ಸ್ಲೋವಾಕಿಯಾ ಮತ್ತು ಉಕ್ರೇನ್‌ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ನಾಲ್ಕೂ ತಂಡಗಳೂ ತಲಾ ಎರಡು ಪಂದ್ಯಗಳನ್ನು ಆಡಿದ್ದು, ಎಲ್ಲಾ ತಂಡಗಳು ತಲಾ ಒಂದರಲ್ಲಿ ಗೆದ್ದಿವೆ.

ಪಂದ್ಯ ಆರಂಭವಾದ 73 ಸೆಕೆಂಡ್‌ನಲ್ಲೇ ಟೈಲೆಮ್ಯಾನ್ಸ್ ಅವರು ಬೆಲ್ಜಿಯಂ ತಂಡಕ್ಕೆ ಮುನ್ನಡೆ ಒದಗಿಸಿದರು. ಕೆವಿನ್ ಅವರು 80ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ, ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ಬುಧವಾರ ನಡೆಯುವ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಉಕ್ರೇನ್‌ ಹಾಗೂ ರೊಮೇನಿಯಾ ತಂಡವನ್ನು ಸ್ಲೋವಾಕಿಯಾ ಎದುರಿಸಲಿವೆ. ಈ ಪಂದ್ಯಗಳ ಫಲಿತಾಂಶವೇ ನಾಲ್ಕೂ ತಂಡಗಳಿಗೆ ನಿರ್ಣಾಯಕವಾಗಿದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.  

ಇಂದಿನ ಪಂದ್ಯ

ಸ್ಕಾಟ್ಲೆಂಡ್‌– ಹಂಗೆರಿ (ರಾತ್ರಿ 12.30)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.