ADVERTISEMENT

ಬೆಂಗಳೂರು ಎಫ್‌ಸಿ ತಂಡದ ಅಭ್ಯಾಸ ಆರಂಭ

ಪಿಟಿಐ
Published 12 ಮಾರ್ಚ್ 2021, 15:41 IST
Last Updated 12 ಮಾರ್ಚ್ 2021, 15:41 IST
ತರಬೇತಿ ಸಂದರ್ಭದಲ್ಲಿ ಮಾರ್ಕೊ ಪೆಜಯೊಲಿ –ಟ್ವಿಟರ್ ಚಿತ್ರ
ತರಬೇತಿ ಸಂದರ್ಭದಲ್ಲಿ ಮಾರ್ಕೊ ಪೆಜಯೊಲಿ –ಟ್ವಿಟರ್ ಚಿತ್ರ   

ಬೆಂಗಳೂರು: ಹೊಸ ಕೋಚ್ ಮಾರ್ಕೊ ಪೆಜಯೊಲಿ ಮಾರ್ಗದರ್ಶನದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತರಬೇತಿ ಶುಕ್ರವಾರ ಆರಂಭಗೊಂಡಿತು. ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ ನಂತರ ಕೋಚ್ ಕಾರ್ಲಸ್ ಕ್ವದ್ರತ್ ತಂಡವನ್ನು ತೊರೆದಿದ್ದರು. ಹಂಗಾಮಿ ಕೋಚ್ ನೌಶಾದ್ ಮೂಸಾ ಮಾರ್ಗದರ್ಶನದಲ್ಲಿ ಉಳಿದ ಪಂದ್ಯಗಳನ್ನು ತಂಡ ಆಡಿತ್ತು.

ಈ ನಡುವೆ ಮಾರ್ಕೊ ಅವರನ್ನು ತಂಡದ ಆಡಳಿತ ನೇಮಕ ಮಾಡಿಕೊಂಡಿತ್ತು. ಎಎಫ್‌ಸಿ ಕಪ್‌ ಟೂರ್ನಿಗೆ ಸಜ್ಜಾಗುತ್ತಿರುವ ಬಿಎಫ್‌ಸಿಗೆ ಸದ್ಯ ನಾಯಕ ಸುನಿಲ್ ಚೆಟ್ರಿ ಲಭ್ಯರಿಲ್ಲ. ಕೋವಿಡ್‌–19 ಸೋಂಕು ತಗುಲಿರುವ ಕಾರಣ ಅವರು ಕಣಕ್ಕೆ ಇಳಿಯುತ್ತಿಲ್ಲ. ಹೊಸದಾಗಿ ತಂಡವನ್ನು ಸೇರಿಕೊಂಡಿರುವ ರೊಂಡು ಮುಸಾವು ಕಿಂಗ್ ತರಬೇತಿಗೆ ಹಾಜರಾಗಿದ್ದಾರೆ.

‘ತಂಡದ ಜೊತೆ ಮೊದಲ ತರಬೇತಿ ಕಾರ್ಯಕ್ರಮ ಖುಷಿ ಕೊಟ್ಟಿತು. ಆಟಗಾರರು ನನ್ನ ಜೊತೆಗೆ ಕಳೆದ ಕ್ಷಣಗಳಲ್ಲಿ ಸಂತಸಗೊಂಡಿದ್ದಾರೆ ಎಂಬುದು ನನ್ನ ಅನಿಸಿಕೆ. ಮೊದಲ ತರಬೇತಿಯಲ್ಲೇ ಸಂಪೂರ್ಣ ಸಾಮರ್ಥ್ಯದಲ್ಲಿ ಆಡುವ ಭರವಸೆ ಮೂಡಿಸಿದ್ದಾರೆ. ಇದು ಅಭಿನಂದನಾರ್ಹ’ ಎಂದು ಮಾರ್ಕೊ ಹೇಳಿದರು.

ADVERTISEMENT

‘ಬಿ’ ತಂಡದ ಜಗದೀಪ್ ಸಿಂಗ್‌, ದಮೈತ್‌ಫಂಗ್ ಲಿಂಗ್ಡೊ ಮತ್ತು ಒಮೇಗಾ ವನ್‌ಲಾಲ್‌ರೈತುಂಗ ಸೇರಿದಂತೆ ಒಟ್ಟು 22 ಮಂದಿ ಆಟಗಾರರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ತಂಡದ ಎಎಫ್‌ಸಿ ಕಪ್ ಅರ್ಹತಾ ಸುತ್ತಿನ ಎರಡನೇ ಹಂತದ ಪಂದ್ಯ ಏಪ್ರಿಲ್ 14ರಂದು ಗೋವಾದ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.