ಬ್ಯಾಂಬೊಲಿಮ್: ಅಗ್ರ ನಾಲ್ಕರ ಘಟ್ಟದಲ್ಲಿ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿರುವಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಜೆಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡಗಳು ಶನಿವಾರ ಮುಖಾಮುಖಿಯಾಗಲಿವೆ.
ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆದ್ದ ಜೆಮ್ಶೆಡ್‌ಪುರದ ನಾಗಾಲೋಟಕ್ಕೆ ಅಂತ್ಯ ಹಾಡುವುದು ಬಿಎಫ್‌ಸಿಯ ಗುರಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ಸುನಿಲ್ ಚೆಟ್ರಿ ಬಳಗದ ಸೆಮಿಫೈನಲ್ ಕನಸಿಗೆ ಜೀವ ತುಂಬಲಿದೆ.
ಹಿಂದಿನ ಎರಡು ವಾರಗಳಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಜೆಮ್ಶೆಡ್‌ಪುರ ಜಯ ಗಳಿಸಿದೆ. ಅಡಿರುವ 12 ಪಂದ್ಯಗಳ ಪೈಕಿ ಆರನ್ನು ಗೆದ್ದುಕೊಂಡಿದ್ದು ಎರಡನ್ನಷ್ಟೇ ಸೋತಿದೆ. ಶನಿವಾರದ ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದ ಸಮೀಪಕ್ಕೆ ಸಾಗಲಿದೆ. ಆದರೆ ಬೆಂಗಳೂರು ವಿರುದ್ಧ ಜಯ ಗಳಿಸುವುದು ಸುಲಭದ ಮಾತಲ್ಲ.
ಆರಂಭದಲ್ಲಿ ನೀರಸ ಆಟವಾಡಿರುವ ಬೆಂಗಳೂರು ಎಫ್‌ಸಿ ನಂತರ ಚೇತರಿಸಿಕೊಂಡಿದ್ದು ಜಯದ ಹಾದಿಗೆ ಮರಳಿದೆ. 14 ಪಂದ್ಯಗಳ ಪೈಕಿ ತಲಾ ಐದು ಗೆಲುವು ಮತ್ತು ಐದು ಡ್ರಾ ಸಾಧಿಸಿದೆ. ತಂಡದ ಖಾತೆಯಲ್ಲಿ ಜೆಮ್ಶೆಡ್‌ಪುರಕ್ಕಿಂತ ಎರಡು ಪಾಯಿಂಟ್‌ಗಳು ಕಡಿಮೆ ಇವೆ. ಶನಿವಾರದ ಪಂದ್ಯದಲ್ಲಿ ಯಶಸ್ಸು ಕಂಡರೆ ಈ ಅಂತರವನ್ನು ಮೀರಿ ಮುಂದೆ ಸಾಗಬಹುದಾಗಿದೆ.
ಈ ಬಾರಿ ಇದೇ ಮೊದಲ ಸಲ ತಂಡ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದು ಹ್ಯಾಟ್ರಿಕ್ ಮೇಲೆ ನೋಟವಿಟ್ಟು ಜೆಮ್ಶೆಡ್‌ಪುರ ವಿರುದ್ಧ ಆಡಲಿದೆ. ಚೆನ್ನೈ ವಿರುದ್ಧ 3–0ಯಿಂದ ಮತ್ತು ಕೇರಳ ಬ್ಲಾಸ್ಟರ್ಸ್ ಎದುರು 1–0ಯಿಂದ ಗೆಲುವು ಸಾಧಿಸಿರುವುದು ತಂಡಕ್ಕೆ ಭರವಸೆ ತುಂಬಿದೆ.
ಗುರುವಾರ ಜನ್ಮದಿನ ಆಚರಿಸಿಕೊಂಡಿರುವ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಬೆಂಗಳೂರು ತಂಡದ ಆಧಾರಸ್ತಂಭದಂತಿದ್ದಾರೆ. ತಾವು ಗೋಲ್‌ಕೀಪಿಂಗ್ ಮಾಡಿರುವ ಹಿಂದಿನ ಏಳು ಪಂದ್ಯಗಳ ಪೈಕಿ ನಾಲ್ಕರಲ್ಲಿ ಅವರು ಕ್ಲೀನ್ ಶೀಟ್ ಹೊಂದಿದ್ದಾರೆ. ಈ ಪೈಕಿ ಮೂರು ಕ್ಲೀನ್‌ಶೀಟ್‌ಗಳು ಹಿಂದಿನ ನಾಲ್ಕು ಪಂದ್ಯಗಳಲ್ಲಿ ಮೂಡಿವೆ.
ಹಿಂದಿನ ಪಂದ್ಯದಲ್ಲಿ ರೋಷನ್ ಸಿಂಗ್ ನೈರೆಮ್ ಅವರು ಐಎಸ್‌ಎಲ್‌ನಲ್ಲಿ ವೈಯಕ್ತಿಕವಾಗಿ ಚೊಚ್ಚಲ ಗೋಲು ಗಳಿಸಿದ್ದರು. ಇದು, ರಕ್ಷಣಾ ವಿಭಾಗದ ಆಟಗಾರನ ಮೇಲೆ ತಂಡ ಭರವಸೆ ಇರಿಸಿಕೊಳ್ಳಲು ಕಾರಣವಾಗಿದೆ.
ರಕ್ಷಣೆಯೇ ಬಲ
ಜೆಮ್ಶೆಡ್‌ಪುರ ತಂಡಕ್ಕೆ ಅದರ ರಕ್ಷಣಾ ವಿಭಾಗವೇ ದೊಡ್ಡ ಬಲ. ಹಲವು ಪಂದ್ಯಗಳಲ್ಲಿ ರಕ್ಷಣಾ ವಿಭಾಗ ತಂಡದ ಕೈ ಹಿಡಿದಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಹೊಂದಿರುವ ತಂಡ ಕಳೆದ ಆರು ಪಂದ್ಯಗಳಲ್ಲಿ ನಾಲ್ಕು ಗೋಲು ಮಾತ್ರ ಬಿಟ್ಟುಕೊಟ್ಟಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡದಿಂದ ಬಂದಿರುವ ಡ್ಯಾನಿಯಲ್ ಚೀಮಾ ಚುಕ್ವು ಐಎಸ್‌ಎಲ್‌ನಲ್ಲಿ ಚೊಚ್ಚಲ ಗೋಲು ಗಳಿಸಿದ್ದಾರೆ.
ಹಿಂದಿನ ಸಲ ಈ ಎರಡು ತಂಡಗಳು ಮುಖಾಮುಖಿಯಾದಾಗ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.