ಬ್ಯಾಂಬೊಲಿಮ್: ಪೆನಾಲ್ಟಿ ಅವಕಾಶದಲ್ಲಿ ಕಾಲ್ಚಳಕ ತೋರಿದ ನಾಯಕ ಸುನಿಲ್ ಚೆಟ್ರಿ ಅವರು ಬೆಂಗಳೂರು ಎಫ್‌ಸಿ ತಂಡಕ್ಕೆ ಈ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯದ ಸವಿ ಉಣಬಡಿಸಿದರು. ಪಂದ್ಯದ 56ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಅವರ ನೆರವಿನಿಂದ ಬಿಎಫ್‌ಸಿ 1–0ಯಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿತು.
‘ದಕ್ಷಿಣ ಡರ್ಬಿ‘ ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು.
7ನೇ ನಿಮಿಷದಲ್ಲಿ ಬಿಎಫ್‌ಸಿಯ ಆಶಿಕ್ ಕುರುಣಿಯನ್ ಅವರು ಹಳದಿ ಕಾರ್ಡ್ ದರ್ಶನ ಮಾಡಿದರು. 16ನೇ ನಿಮಿಷದಲ್ಲೇ ಚೆನ್ನೈಗೆ ಆಘಾತ ಎದುರಾಯಿತು. ಆ ತಂಡದ ಪ್ರಮುಖ ಆಟಗಾರ ಅನಿರುದ್ಧ ಥಾಪಾ ಗಾಯಗೊಂಡು ಹೊರನಡೆದರು. ಬದಲಿ ಆಟಗಾರನಾಗಿ ಎಡ್ವಿನ್ ವನ್ಶ್‌ಪಾಲ್ ಕಣಕ್ಕಿಳಿದರು. 21ನೇ ನಿಮಿಷದಲ್ಲಿ ಚೆನ್ನೈನ ಎಲಿ ಸಬಿಯಾ ಹಳದಿ ಕಾರ್ಡ್ ಪಡೆದರು.
ಮೊದಲಾರ್ಧ ಗೋಲುರಹಿತವಾಯಿತು. 48 ಹಾಗೂ 51ನೇ ನಿಮಿಷದಲ್ಲಿ ಕ್ರಮವಾಗಿ ಚೆನ್ನೈ ತಂಡದ ಕ್ರಿವೆಲ್ಲಾರೊ ಹಾಗೂ ಬಿಎಫ್‌ಸಿಯ ಸುರೇಶ್ ವಾಗ್ಜಮ್ ಹಳದಿ ಕಾರ್ಡ್ ದರ್ಶನ ಮಾಡಬೇಕಾಯಿತು.
56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಚೆಟ್ರಿ ಚೆನ್ನಾಗಿ ಬಳಸಿಕೊಂಡರು. ಅವರು ಒದ್ದ ಚೆಂಡು ಚೆನ್ನೈ ಗೋಲ್‌ಕೀಪರ್ ವಿಶಾಲ್ ಕೈತ್ ಅವರನ್ನು ವಂಚಿಸಿ ಗೋಲು ಪೆಟ್ಟಿಗೆ ಸೇರಿತು. ಬಿಎಫ್‌ಸಿ ತಂಡದಲ್ಲಿ ಸಂತಸ ಉಕ್ಕಿ ಹರಿಯಿತು. 60ನೇ ನಿಮಿಷದಲ್ಲಿ ಮತ್ತೊಂದು ಅವಕಾಶ ಬಿಎಫ್‌ಸಿಗೆ ಇತ್ತು. ಆದರೆ ಈ ಬಾರಿ ಕೈತ್ ಯಶಸ್ವಿಯಾಗಿ ತಡೆದರು.
ಬಳಿಕ ಉಭಯ ತಂಡಗಳ ನಡುವೆ ಪೈಪೋಟಿ ಹೆಚ್ಚಿತು. 90ನೇ ನಿಮಿಷದಲ್ಲಿ ಚೆನ್ನೈಗೆ ಅವಕಾಶ ಇತ್ತು. ಆದರೆ ತಂಡದ ಜಾಕಬ್ ಸಿಲ್ವೆಸ್ಟರ್ ಅವರು ಒದ್ದ ಚೆಂಡನ್ನು ಬಿಎಫ್‌ಸಿಯ ಗುರುಪ್ರೀತ್ ಸಿಂಗ್ ತಡೆದರು.
ಚೆನ್ನೈ ತಂಡದಲ್ಲಿ ನಿರಾಸೆಯ ಕಾರ್ಮೋಡ ಕವಿಯಿತು. ಈ ಜಯದೊಂದಿಗೆ ಬಿಎಫ್‌ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು. ಎಟಿಕೆ ಮೋಹನ್ ಬಾಗನ್ ಮೊದಲ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.