ಬೆಂಗಳೂರು: ಆಕಾಶದೀಪ್ ಸಿಂಗ್ ಗಳಿಸಿದ ನಾಲ್ಕು ಸೊಗಸಾದ ಗೋಲುಗಳ ಬಲದಿಂದ ಬಿಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಜಯಿಸಿತು. ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಎದುರು ಮಂಗಳವಾರ ನಡೆದ ಹಣಾಹಣಿಯಲ್ಲಿ 5–2ರಿಂದ ಗೆಲುವು ಸಾಧಿಸಿತು.
ವಿಜೇತ ತಂಡದ ಪರ ಆಕಾಶದೀಪ್ 10 (ಪೆನಾಲ್ಟಿ), 49, 54 ಮತ್ತು 57ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಶಿವಶಕ್ತಿ ಎನ್. (44ನೇ ನಿಮಿಷ) ಒಂದು ಗೋಲು ಹೊಡೆದರು. ಸ್ಟೂಡೆಂಟ್ಸ್ ಯೂನಿಯನ್ ತಂಡದ ಪರ ಜಪಾನ್ ಮೂಲದ ಆಟಗಾರ ಟಾಯ್‌ಕಿ ಯೋಶಿದಾ (6ನೇ ನಿಮಿಷ) ಹಾಗೂ ಅಕ್ಷಯ್ ಕುಮಾರ್ (89ನೇ ನಿಮಿಷ) ಗೋಲು ದಾಖಲಿಸಿದರು. ಯೋಶಿದಾ ಅವರು ಬಿಡಿಎಫ್‌ಎ ಪಂದ್ಯದಲ್ಲಿ ಗೋಲು ಹೊಡೆದ ಜಪಾನ್ ಮೊದಲ ಆಟಗಾರ ಎನಿಸಿಕೊಂಡರು.
ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ (ಎಫ್‌ಸಿಬಿಯು) 1–1ರಿಂದ ಬೆಂಗಳೂರು ಈಗಲ್ಸ್ ಎಫ್‌ಸಿಯೊಂದಿಗೆ ಡ್ರಾ ಸಾಧಿಸಿತು. ಮಿಟೇಯ್ (31ನೇ ನಿಮಿಷ) ಎಫ್‌ಸಿಬಿಯು ಪರ ಗೋಲು ಹೊಡೆದರೆ, ಈಗಲ್ಸ್ ತಂಡದ ಕೆ.ಗೋಪಿ (31ನೇ ನಿಮಿಷ) ಕಾಲ್ಚಳಕ ತೋರಿದರು.
ಬುಧವಾರ ಎಂಇಜಿ ಸೆಂಟರ್ ಎಫ್‌ಸಿ– ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ಹಾಗೂ ಯಂಗ್ ಚಾಲೆಂಜರ್ಸ್ ಎಫ್‌ಸಿ– ಇನ್‌ಕಮ್ ಟ್ಯಾಕ್ಸ್ ಎಫ್‌ಸಿ ಮುಖಾಮುಖಿಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.