ನವದೆಹಲಿ: ಭಾರತದ ದಿಗ್ಗಜ ಫುಟ್‌ಬಾಲ್ ಆಟಗಾರ ಭೈಚುಂಗ್ ಭುಟಿಯಾ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಭುಟಿಯಾ ಅವರ ಹೆಸರನ್ನು ಭಾರತ ತಂಡದ ಮಾಜಿ ಆಟಗಾರ ದೀಪಕ್ ಮೊಂಡಲ್ ಸೂಚಿಸಿದರೆ, ಮಧು ಕುಮಾರಿ ಅನುಮೋದಿಸಿದರು. ಮಧುಕುಮಾರಿ ಅವರ ಹೆಸರು ‘ಖ್ಯಾತನಾಮ ಆಟಗಾರರ’ ಪಟ್ಟಿಯಲ್ಲಿದ್ದು, ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
‘ಖ್ಯಾತನಾಮ ಆಟಗಾರರ ಪ್ರತಿನಿಧಿಯಾಗಿದ್ದುಕೊಂಡು ನಾನು ನಾಮಪತ್ರ ಸಲ್ಲಿಸಿದ್ದೇನೆ. ಮಾಜಿ ಆಟಗಾರರಿಗೆ ಮತದಾನದ ಹಕ್ಕು ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನಾವು ಉತ್ತಮ ಆಟಗಾರರು ಮಾತ್ರವಲ್ಲ, ಆಡಳಿತಗಾರರೂ ಹೌದು ಎಂಬುದನ್ನು ತೋರಿಸಬೇಕಿದೆ’ ಎಂದು ಭುಟಿಯಾ ಪ್ರತಿಕ್ರಿಯಿಸಿದರು.
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿತ್ತು. ದೆಹಲಿ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ ಶಾಜಿ ಪ್ರಭಾಕರನ್, ಮಾಜಿ ಆಟಗಾರ ಯೂಜೆನ್ಸನ್ ಲಿಂಗ್ಡೊ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಹೋದರ ಅಜಿತ್ ಬ್ಯಾನರ್ಜಿ ಅವರು ಕೊನೆಯ ದಿನ ಉಮೇದುವಾರಿಕೆ ಸಲ್ಲಿಸಿದರು.
ಮುಂಚೂಣಿಯಲ್ಲಿ ಕಲ್ಯಾಣ್ ಚೌಬೆ: ಭಾರತ ತಂಡದ ಮಾಜಿ ಗೋಲ್‌ಕೀಪರ್ ಕಲ್ಯಾಣ್ ಚೌಬೆ ಅವರು ಎಐಎಫ್‌ಎಫ್ ಅಧ್ಯಕ್ಷ ಸ್ಥಾನದ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಗುಜರಾತ್ ಫುಟ್‌ಬಾಲ್ ಸಂಸ್ಥೆಯು ಚೌಬೆ ಅವರ ಹೆಸರನ್ನು ಸೂಚಿಸಿದ್ದರೆ, ಅರುಣಾಚಲ ಪ್ರದೇಶ ಫುಟ್‌ಬಾಲ್ ಸಂಸ್ಥೆ ಅನುಮೋದಿಸಿತ್ತು.
ಎಐಎಫ್‌ಎಫ್ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ 36 ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು 36 ಖ್ಯಾತನಾಮ ಆಟಗಾರರು ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಟಗಾರರ ಪಟ್ಟಿಯಲ್ಲಿ 24 ಪುರುಷರು, 12 ಮಹಿಳೆಯರು ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.