ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಪಂಜಾಬ್‌ ಸವಾಲು

ಅಗ್ರ ತಂಡಗಳ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 19:30 IST
Last Updated 17 ಅಕ್ಟೋಬರ್ 2024, 19:30 IST
ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ
ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ   

ಬೆಂಗಳೂರು: ಪಾಯಿಂಟ್‌ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಬೆಂಗಳೂರು ಎಫ್‌ಸಿ ಮತ್ತು ಪಂಜಾಬ್‌ ಎಫ್‌ಸಿ ತಂಡಗಳು ಇಂಡಿಯನ್‌ ಸೂಪರ್‌ ಲೀಗ್‌ನ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಸುನಿಲ್‌ ಚೆಟ್ರಿ ನಾಯಕತ್ವದ ಆತಿಥೇಯ ತಂಡ ಗೆಲುವಿನ ಓಟವನ್ನು ಮುಂದುವರಿಸುವ ಛಲದಲ್ಲಿದೆ.

ಬಿಎಫ್‌ಸಿ ತಂಡವು ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಮುಂಬೈ ನಡೆದ ಕೊನೆಯ ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧ ಗೋಲುರಹಿತವಾಗಿ ಡ್ರಾ ಮಾಡಿಕೊಂಡಿದೆ. ಒಟ್ಟಾರೆ 10 ಅಂಕ ಪಡೆದಿರುವ ಬಿಎಫ್‌ಸಿ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ADVERTISEMENT

ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿರುವ ಪಂಜಾಬ್‌ ತಂಡವು ಆತಿಥೇಯರಿಗೆ ಪ್ರಬಲ ಸವಾಲೊಡ್ಡುವ ತವಕದಲ್ಲಿದೆ. ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಪಂಜಾಬ್‌ 9 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

‘ಟೂರ್ನಿಯಲ್ಲಿ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ತವರಿನಂಗಳದಲ್ಲಿ ಅಜೇಯ ಓಟವನ್ನು ಮುಂದುವರಿಸುವ ಪ್ರಯತ್ನ ನಮ್ಮದು. ಆದರೂ ‌ಪ್ರಬಲ ತಂಡಗಳ ನಡುವೆ ಉತ್ತಮ ಪೈಪೋಟಿ ನಿರೀಕ್ಷೆಯಿದೆ’ ಎಂದು ಬಿಎಫ್‌ಸಿ ತಂಡದ ಕೋಚ್‌ ಗೆರಾರ್ಡ್  ಜರಗೋಜಾ ಹೇಳಿದ್ದಾರೆ.

ಮಹಿಳೆಯರ ಸುರಕ್ಷತೆಯ ಜಾಗೃತಿಗಾಗಿ ಶುಕ್ರವಾರದ ಪಂದ್ಯದಲ್ಲಿ ಬಿಎಫ್‌ಸಿ ತಂಡವು ಗುಲಾಬಿ ಬಣ್ಣದ ಜರ್ಸಿಯಲ್ಲಿ ಕಣಕ್ಕೆ ಇಳಿಯುವರು. ‘ಲೌಡರ್ ದ್ಯಾನ್ ಎವರ್’ ಅಭಿಯಾನದ ಭಾಗವಾಗಿ ಕ್ರೀಡಾಂಗಣದ ‘ಫ್ಯಾನ್‌ಝೋನ್‌’ನಲ್ಲಿ ಮಹಿಳಾ ಭದ್ರತಾ ಸಹಾಯ ಕೇಂದ್ರವನ್ನು ಅಳವಡಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೊ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.