ADVERTISEMENT

ವಾರೆನ್ ಮಿಂಚು: ಸೆಮಿಗೆ ಫ್ರೆಂಚ್ ಬಳಗ

ಸೋಲಿನ ಕಣ್ಣೀರಲ್ಲಿ ಮುಳುಗಿದ ಉರುಗ್ವೆ ತಂಡದ ಆಟಗಾರರು

ಏಜೆನ್ಸೀಸ್
Published 6 ಜುಲೈ 2018, 19:51 IST
Last Updated 6 ಜುಲೈ 2018, 19:51 IST
ಫ್ರಾನ್ಸ್‌ ಆಂಟೋಯ್ನ್‌ ಗ್ರೀಜ್‌ಮನ್‌ ಅವರು ಉರುಗ್ವೆಯ ಲೂಕಾಸ್‌ ಟೊರೇರಾ ಅವರಿಂದ ಚೆಂಡು ಕಸಿದುಕೊಳ್ಳಲು ಶ್ರಮಿಸಿದರು. –ಎಎಫ್‌ಪಿ ಚಿತ್ರ
ಫ್ರಾನ್ಸ್‌ ಆಂಟೋಯ್ನ್‌ ಗ್ರೀಜ್‌ಮನ್‌ ಅವರು ಉರುಗ್ವೆಯ ಲೂಕಾಸ್‌ ಟೊರೇರಾ ಅವರಿಂದ ಚೆಂಡು ಕಸಿದುಕೊಳ್ಳಲು ಶ್ರಮಿಸಿದರು. –ಎಎಫ್‌ಪಿ ಚಿತ್ರ   

ಮಾಸ್ಕೊ: ಫ್ರಾನ್ಸ್‌ ಫುಟ್‌ಬಾಲ್‌ ಅಭಿಮಾನಿಗಳ ಬಳಗದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಶುಕ್ರವಾರ ರಾತ್ರಿ ನಿಜ್ನಿ ನೊವರೊರೊದ್ ಕ್ರೀಡಾಂಗಣದಿಂದ ಪ್ಯಾರಿಸ್‌ನ ಬೀದಿ ಬೀದಿಗಳಲ್ಲಿಯೂ ಸಂತಸದ ಹೊನಲು ಹರಿಯಿತು.

ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ರಾಫೆಲ್ ವಾರೇನ್ ಮತ್ತು ಆ್ಯಂಟೋನ್ ಗ್ರೀಜ್‌ಮನ್ ಅವರು ಗಳಿಸಿದ ತಲಾ ಒಂದು ಗೋಲಿನ ಬಲದ ಫ್ರಾನ್ಸ್ ತಂಡವು 2–0ಯಿಂದ ಉರುಗ್ವೆ ತಂಡದ ಎದುರು ಗೆದ್ದಿತು.

ಟೂರ್ನಿಯುದ್ದಕ್ಕೂ ಉರುಗ್ವೆ ರಕ್ಷಣಾ ವಿಭಾಗವು ಉತ್ತಮವಾಗಿ ಆಡಿತ್ತು. ಆದರೆ ಈ ಪಂದ್ಯದಲ್ಲಿ ಒತ್ತಡಕ್ಕೊಳಗಾದ ರಕ್ಷಣಾ ಆಟಗಾರರು ಫ್ರಾನ್ಸ್‌ನ ಮಿಂಚಿನ ಆಟದ ಮುಂದೆ ಮಂಕಾದರು. 40ನೇ ನಿಮಿಷದಲ್ಲಿ ವಾರೆನ್ ಅವರಿಗೆ ಅಡ್ಡಗಾಲು ಹಾಕಿ ಕೆಡವಿದ ಉರುಗ್ವೆಯ ಆಟಗಾರ ಹಳದಿ ಕಾರ್ಡ್ ದರ್ಶನ ಮಾಡಿದರು. ನಂತರ ವಾರೇನ್ ಅವರು ಉರುಗ್ವೆಯ ಮೂವರು ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್‌ನನ್ನು ವಂಚಿಸಿ ಚೆಂಡನ್ನು ಗೋಲು ಬಲೆಗೆ ಸೇರಿಸಿದರು. ಫ್ರಾನ್ಸ್‌ ಬಳಗದಲ್ಲಿ ಸಂತಸ ಗರಿಗೆದರಿತು.

ADVERTISEMENT

ನಂತರದ ಆಟದಲ್ಲಿ ಫ್ರೆಂಚ್‌ ಬಳಗವು ಮತ್ತಷ್ಟು ಚುರುಕಿನಿಂದ ಆಡಿತು. ಚುಟುಕಾದ ಪಾಸ್‌ಗಳು, ನಿಖರವಾದ ಕಿಕ್‌ಗಳ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿತು. 60ನೇ ನಿಮಿಷದಲ್ಲಿ ಆ್ಯಂಟೋನ್‌ ಗ್ರೇಜ್‌ಮನ್ ಅವರು ಗೋಲು ವೃತ್ತದೊಳಗೆ ನುಗ್ಗಿ ಚೆಂಡನ್ನು ಕಿಕ್ ಮಾಡಿದರು. ಉರುಗ್ವೆ ಗೋಲ್‌ಕೀಪರ್ ಚೆಂಡು ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಅವರ ಕೈಗಳ ನಡುವಿನಿಂದ ಸಾಗಿದ ಚೆಂಡು ಗೋಲಿನೊಳಗೆ ಸಾಗಿತು.

ಇದಾದ ನಂತರ ಉರುಗ್ವೆಯ ಆಟಗಾರರು ಕಳೆಗುಂದುತ್ತ ಸಾಗಿ ದರು. ಪರಿಣಾಮಕಾರಿಯಾಗಿ ಆಡು ವಲ್ಲಿ ವಿಫಲರಾದರು. ಇಂಜುರಿ ವೇಳೆಯಲ್ಲಂತೂ ಉರುಗ್ವೆಯ ಎಲ್ಲ ಆಟಗಾರರು ಕಣ್ಣೀರು ಹಾಕುತ್ತಲೇ ಆಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.