ADVERTISEMENT

ಹದಿನಾರರ ಘಟ್ಟದತ್ತ ಸಾಂಬಾ ನಾಡಿನ ಚಿತ್ತ

ಇಂದು ಸರ್ಬಿಯಾ ಎದುರು ಮಹತ್ವದ ಹಣಾಹಣಿ

ರಾಯಿಟರ್ಸ್
Published 26 ಜೂನ್ 2018, 20:18 IST
Last Updated 26 ಜೂನ್ 2018, 20:18 IST
ಬ್ರೆಜಿಲ್‌ ತಂಡದ ನೇಮರ್‌ (ಬಲ) ಮತ್ತು ಫಿಲಿಪ್‌ ಕುಟಿನ್ಹೊ ಅಭ್ಯಾಸದ ವೇಳೆ ತಮಾಷೆಯಲ್ಲಿ ತೊಡಗಿದ್ದರು ಎಎಫ್‌ಪಿ ಚಿತ್ರ
ಬ್ರೆಜಿಲ್‌ ತಂಡದ ನೇಮರ್‌ (ಬಲ) ಮತ್ತು ಫಿಲಿಪ್‌ ಕುಟಿನ್ಹೊ ಅಭ್ಯಾಸದ ವೇಳೆ ತಮಾಷೆಯಲ್ಲಿ ತೊಡಗಿದ್ದರು ಎಎಫ್‌ಪಿ ಚಿತ್ರ   

ಮಾಸ್ಕೊ : ಇಪ್ಪತ್ತೊಂದನೇ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್‌ ತಂಡ ಈಗ ಹದಿನಾರರ ಹಂತಕ್ಕೇರುವ ಕನಸು ಕಾಣುತ್ತಿದೆ.

ಬುಧವಾರ ನಡೆಯುವ ‘ಇ’ ಗುಂಪಿನ ಹಣಾಹಣಿಯಲ್ಲಿ ಥಿಯಾಗೊ ಸಿಲ್ವ ಸಾರಥ್ಯದ ಬ್ರೆಜಿಲ್‌ ತಂಡ ಸರ್ಬಿಯಾ ಎದುರು ಸೆಣಸಲಿದೆ. ಈ ಹಣಾಹಣಿಯಲ್ಲಿ ಡ್ರಾ ಮಾಡಿಕೊಂಡರೂ ಸಿಲ್ವ ಪಡೆಯ ಪ್ರೀ ಕ್ವಾರ್ಟರ್‌ ಫೈನಲ್‌ ಹಾದಿ ಸುಗಮವಾಗಲಿದೆ. ಸರ್ಬಿಯಾ ತಂಡ 16ರ ಘಟ್ಟಕ್ಕೆ ಲಗ್ಗೆ ಇಡಬೇಕಾದರೆ ಈ ಹೋರಾಟದಲ್ಲಿ ಸಾಂಬಾ ನಾಡಿನ ತಂಡದ ಸವಾಲು ಮೀರಿ ನಿಲ್ಲಲೇಬೇಕು.

ಫಿಫಾ ವಿಶ್ವಕಪ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಬ್ರೆಜಿಲ್‌, ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ ಎದುರು ಡ್ರಾ ಮಾಡಿಕೊಂಡಿತ್ತು. ಎರಡನೇ ಹಣಾಹಣಿಯಲ್ಲಿ ಕೋಸ್ಟರಿಕಾವನ್ನು ಸೋಲಿಸಿತ್ತು.

ADVERTISEMENT

ಬ್ರೆಜಿಲ್‌ ತಂಡ ಹಿಂದಿನ 21 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತಿದೆ. ಈ ತಂಡ 47 ಗೋಲುಗಳನ್ನು ದಾಖಲಿಸಿದೆ. ಎದುರಾಳಿಗಳಿಗೆ ಐದು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟಿದೆ.

ನೇಮರ್‌ ಮತ್ತು ಫಿಲಿಪ್‌ ಕುಟಿನ್ಹೊ ಈ ಪಂದ್ಯದ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದಾರೆ. ಕೋಸ್ಟರಿಕಾ ಎದುರು ಇವರು ಹೆಚ್ಚುವರಿ ಅವಧಿಯಲ್ಲಿ ಗೋಲು ಗಳಿಸಿ ಗಮನ ಸೆಳೆದಿದ್ದರು.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ಆಡುವ ಕುಟಿನ್ಹೊ ಈ ಬಾರಿ ಒಟ್ಟು ಎರಡು ಗೋಲು ದಾಖಲಿಸಿದ್ದಾರೆ. ಉತ್ತಮ ಲಯದಲ್ಲಿರುವ ಅವರು ಸ್ಪಾರ್ಟಕ್‌ ಕ್ರೀಡಾಂಗಣದಲ್ಲೂ ಕಾಲ್ಚಳಕ ತೋರಲು ಕಾತರರಾಗಿದ್ದಾರೆ. ನೇಮರ್‌ ಕೂಡಾ ತಂಡಕ್ಕೆ ಜಯ ತಂದುಕೊಡುವ ಗುರಿ ಹೊಂದಿದ್ದಾರೆ.

ಈ ಪಂದ್ಯದಲ್ಲಿ ಬ್ರೆಜಿಲ್‌ 4–3–3ರ ಯೋಜನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ನಾಯಕ ಸಿಲ್ವ, ಮಿರಾಂಡ, ಫಾಗ್ನರ್‌ ಮತ್ತು ಮಾರ್ಷೆಲೊ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರಸ್ತಂಭಗಳಾಗಿದ್ದಾರೆ.

ಕ್ಯಾಸೆಮಿರೊ ಮತ್ತು ಪೌಲಿನ್ಹೊ, ಮಿಡ್‌ಫೀಲ್ಡ್‌ ವಿಭಾಗಕ್ಕೆ ಬಲ ತುಂಬುವ ವಿಶ್ವಾಸದಲ್ಲಿದ್ದಾರೆ. ಮುಂಚೂಣಿ ವಿಭಾಗದಲ್ಲಿ ಆಡುವ ವಿಲಿಯನ್‌ ಮತ್ತು ಗೇಬ್ರಿಯಲ್‌ ಜೀಸಸ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಸರ್ಬಿಯಾ ಕೂಡಾ ಜಯದ ಗುರಿ ಹೊಂದಿದೆ. ಈ ತಂಡ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದಿರುವ ತಂಡದ ಖಾತೆಯಲ್ಲಿ ಮೂರು ಪಾಯಿಂಟ್ಸ್‌ ಇವೆ.

ರಕ್ಷಣಾ ವಿಭಾಗದ ಆಟಗಾರರಾದ ಆ್ಯಂಟೊನಿಯೊ ರುಕಾವಿನಾ, ದುಸ್ಕೊ ತೋಸಿಚ್‌, ಉರೊಸ್‌ ಸ್ಪಾಜಿಚ್‌, ಮಿಲೊಸ್‌ ವೆಲಜಕೊವಿಚ್‌ ಮತ್ತು ಮಿಲಾನ್‌ ರಾಡಿಚ್‌ ಅವರು ಬ್ರೆಜಿಲ್‌ ಆಟಗಾರರನ್ನು ಆವರಣ ಪ್ರವೇಶಿಸದಂತೆ ನಿಯಂತ್ರಿಸುವ ವಿಶ್ವಾಸದಲ್ಲಿದ್ದಾರೆ.

ಮುಂಚೂಣಿ ವಿಭಾಗದಲ್ಲಿ ಆಡುವ ಅಲೆಕ್ಸಾಂಡರ್‌ ಪ್ರಿಜೊವಿಚ್‌, ಅಲೆಕ್ಸಾಂಡರ್‌ ಮಿತ್ರೊವಿಚ್‌, ನೆಮಾಂಜ ರಾಡೊನ್‌ಜಿಚ್‌ ಮತ್ತು ಲುಕಾ ಜೊವಿಚ್‌ ಅವರು ಮಿಂಚುವ ತವಕದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.