ತಮ್ಮ ಅಪ್ಪ ಬೀಸಾಕಿದ್ದ ಕಾಲುಚೀಲದಲ್ಲಿ ಕಾಗದ ತುಂಬಿ ಉಂಡೆಕಟ್ಟಿ ಕಿಕ್ ಮಾಡುತ್ತಿದ್ದ ಆ ಹುಡುಗನನ್ನು ನೋಡಿ ನಕ್ಕವರು ಹಲವರು. ಆದರೆ ಆ ಗುಂಗುರು ಕೂದಲಿನ ’ಕಪ್ಪು ಹುಡುಗ‘ ಫುಟ್‌ಬಾಲ್ ಲೋಕದ ’ಯುಗಪುರುಷ‘ನಾಗಿ ಬೆಳೆದಿದ್ದು ಕ್ರೀಡಾಲೋಕದ ಸುವರ್ಣ ಅಧ್ಯಾಯ.
ಆ ಬಾಲಕನೇ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ಅಂದರೆ ಪೆಲೆ. ಸಾಂಬಾ ನಾಡು ಬ್ರೆಜಿಲ್ ಮೂರು ಬಾರಿ ಫಿಫಾ ವಿಶ್ವಕಪ್ ಜಯಿಸಲು ಕಾರಣರಾದರು. ಅವರ ಡ್ರಿಬ್ಲಿಂಗ್, ಬೈಸಿಕಲ್ ಕಿಕ್ ಮತ್ತು ಪಾಸಿಂಗ್ ಕೌಶಲಗಳ ಮಿಂಚಿನ ಸಂಚಲನಕ್ಕೆ ಎದುರಾಳಿಗಳು ಆಘಾತಕ್ಕೊಳಗಾಗುತ್ತಿದ್ದರು. ಅಭಿಮಾನಿಗಳು ಮನಸೋಲುತ್ತಿದ್ದರು. 1940ರಲ್ಲಿ ಬ್ರೆಜಿಲ್ ರಾಜಧಾನಿ ರಿಯೊ ಡಿ ಜನೈರೊ ನಗರದ ಉತ್ತರ ದಿಕ್ಕಿನಲ್ಲಿರುವ ಬಾವುರು ಶ್ರಮಜೀವಿಗಳು ಮತ್ತು ಬಡಕುಟುಂಬಗಳು ತುಂಬಿದ್ದ ಊರಿನಲ್ಲಿ ಜನಿಸಿದ್ದರುಪೆಲೆ.
ಅಪ್ಪ ದಾಂಡಿನೊ (ಝಾವೊ ರಾಮೊಸ್ ಡು ನಸಿಮೆಂಟೊ) ಆರಡಿ ಎತ್ತರಕಾಯದ ಕಟ್ಟುಮಸ್ತಾದ ಸೆಂಟರ್ ಫಾರ್ವರ್ಡ್ ಆಟಗಾರ. ಅಮ್ಮ ಸೆಲೆಸ್ಟಿ ಶಿಸ್ತಿನ ಮಹಿಳೆ. ಮನೆಯಲ್ಲಿ ಬಡತನವಿತ್ತು. ಆದರೆ ಫುಟ್‌ಬಾಲ್ ಪ್ರೀತಿ ಮತ್ತು ಸಭ್ಯತೆ ಶ್ರೀಮಂತವಾಗಿತ್ತು. ಬ್ರೆಜಿಲ್‌ನ ಪ್ರಮುಖ ಕ್ಲಬ್‌ಗಳಲ್ಲಿ ದಾಂಡಿನೊ ಆಡಿದ್ದರು. ಆದರೆ ಆ ಕಾಲದಲ್ಲಿ ಕ್ಲಬ್‌ಗಳಲ್ಲಿ ದೊಡ್ಡ ಮಟ್ಟದ ವೇತನ, ಬೋನಸ್ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿರಲಿಲ್ಲ. ಇಂತಹದ್ದರಲ್ಲಿ ಪಂದ್ಯವೊಂದರಲ್ಲಿ ದಾಂಡಿನೊ ಮೊಣಕಾಲಿಗೆ ಗಾಯವಾಗುತ್ತದೆ. ಆದರೆ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೇ ಕಾಲಕ್ರಮೇಣ ಗಾಯ ಉಲ್ಬಣಿಸಿ ದಾಂಡಿನೊ ಫುಟ್‌ಬಾಲ್ ಬಿಡುತ್ತಾರೆ. ಕೈಯಲ್ಲಿ ಉದ್ಯೋಗವೂ ಇಲ್ಲದ ಕಾರಣ ಕುಟುಂಬ ಅಕ್ಷರಶಃ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗುತ್ತದೆ. ಮನೆಯಲ್ಲಿ ಪೆಲೆ, ತಮ್ಮ ಝೋಕಾ, ತಂಗಿ ಮರಿಯಾ ಲೂಸಿಯಾ, ಅಜ್ಜಿ ಮತ್ತು ಚಿಕ್ಕಪ್ಪ ಜಾರ್ಜ್ ಸೇರಿದಂತೆ ಏಳು ಮಂದಿ ಇದ್ದರು.
ಇದನ್ನೂ ಓದಿ:ಫುಟ್‌ಬಾಲ್ ದಿಗ್ಗಜ ಪೆಲೆ ಇನ್ನಿಲ್ಲ
’ಪುಡಿಗಾಸಿಗಾಗಿ ಅಪ್ಪ ಎಲ್ಲೆಲ್ಲೋ ದುಡಿಯುತ್ತಿದ್ದರು. ಅವರಿಗೆ ತಕ್ಕನಾದ ಕೆಲಸ ಸಿಗುತ್ತಿರಲಿಲ್ಲ. ಬಂದ ಅಲ್ಪಸ್ವಲ್ಪ ಹಣದಲ್ಲಿ ಒಪ್ಪೊತ್ತು ಊಟ ಸಿಗುತ್ತಿತ್ತು. ಅದೂ ಬ್ರೆಡ್ ಮತ್ತು ಬಾಳೆಹಣ್ಣಿನ ರೂಪದಲ್ಲಿ. ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಅಮ್ಮ ನಮ್ಮನ್ನು ಉಪವಾಸ ಮಲಗಲು ಬಿಡಲಿಲ್ಲ’ ಎಂದು ಪೆಲೆ ತಮ್ಮ ಆತ್ಮಚರಿತ್ರೆಯಲ್ಲಿ ಬರೆಯುತ್ತಾರೆ.
ಮನೆಯ ಹಿರಿಮಗನಾದ ಕಾರಣ ತಾವೂ ದುಡಿದು ಕುಟುಂಬಕ್ಕೆ ಆಸರೆಯಾಗಲು ಮುಂದಾಗುವ ಪೆಲೆ, ಚಿಕ್ಕಪ್ಪ ಜಾರ್ಜ್ ಸಹಾಯದಿಂದ ಬೂಟ್ ಪಾಲಿಷ್ ಕಿಟ್ ಖರೀದಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಪ್ಪ ಆಡುತ್ತಿದ್ದ ಫುಟ್‌ಬಾಲ್ ಕ್ಲಬ್, ರೈಲ್ವೆ ನಿಲ್ದಾಣಗಳಲ್ಲಿ ಬೂಟು ಪಾಲಿಷ್ ಮಾಡಿ ಹಣ ಗಳಿಸಿದರು. ಒಂದೆರಡು ವರ್ಷಗಳ ನಂತರ ಹೆಲ್ತ್ ಕ್ಲಿನಿಕ್‌ನಲ್ಲಿ ಅಪ್ಪನಿಗೆ ಕೆಲಸ ಸಿಕ್ಕಿತು. ಕುಟುಂಬ ನಿಟ್ಟುಸಿರು ಬಿಟ್ಟಿತು. ಆ ಕೂಡಲೇ ಅಮ್ಮ ಸೆಲೆಸ್ಟಾ ಪೆಲೆ ಕೈಯಿಂದ ಬೂಟ್ ಪಾಲಿಷ್ ಕಿಟ್ ಕಿತ್ತುಕೊಂಡು, ಶಾಲೆಗೆ ಸೇರಿಸಿದರು. ಮಗ ಚೆನ್ನಾಗಿ ಓದಬೇಕು ದೊಡ್ಡ ವ್ಯಕ್ತಿಯಾಗಬೇಕು ಎಂಬುದು ಅವರ ಆಸೆಯಾಗಿತ್ತು. ಕಿರಿಯ ಮಗ ಝೋಕೊ ವೈದ್ಯನಾದ. ಪೆಲೆ ಓದಿಗಿಂತ ಹೆಚ್ಚಾಗಿ ಫುಟ್‌ಬಾಲ್ ನಲ್ಲಿಯೇ ಕಾಲ ಕಳೆದು ದಿಗ್ಗಜರಾದರು.
ಈ ಹಾದಿಯಲ್ಲಿ ಅವರು ಅನುಭವಿಸಿದ ಸಂಕಷ್ಟಗಳು ಹಲವು. ಶ್ವೇತವರ್ಣಿಯರಿಂದ ಆಗುವ ಅವಮಾನಗಳನ್ನೂ ಮುಗಳ್ನುಗತ್ತಲೇ ಎದುರಿಸಿದರು. ಅವರೊಳಗೆ ಹುದುಗಿದ್ದ ಕಿಚ್ಚು ಕಾಲುಗಳಲ್ಲಿ ವಿದ್ಯುತ್ ಶಕ್ತಿಯಾಗಿ ಪ್ರವಹಿಸುತ್ತಿತ್ತು. ಶಾಲೆ, ಸ್ಥಳೀಯ ಕ್ಲಬ್‌ಗಳಲ್ಲಿ ಆಟ ರಂಗೇರಿತು. 17ನೇ ವಯಸ್ಸಿಗೆ ರಾಷ್ಟ್ರೀಯ ತಂಡದ ಕದ ತೆರೆಯಿತು. 1958ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಸ್ವೀಡನ್ ವಿರುದ್ಧ ಬ್ರೆಜಿಲ್ ಜಯಭೇರಿ ಬಾರಿಸಿತು. ಪಂದ್ಯಕ್ಕೂ ಮುನ್ನ ಮೊಣಕಾಲಿನ ಗಾಯ ಕಾಡಿತ್ತು. ಚಿಕಿತ್ಸೆ ಪಡೆದು ಕಣ ಕ್ಕಿಳಿದಿದ್ದ ಪೆಲೆ ಆಟ ರಂಗೇರಿತ್ತು. ಯುರೋಪ್ ನೆಲದಲ್ಲಿ ಐರೋಪ್ಯೇತರ ದೇಶವೊಂದು ಗೆದ್ದಿದ್ದು ಅದೇ ಮೊದಲು. ಇದರೊಂದಿಗೆ ಬ್ರೆಜಿಲ್ ದೇಶವೂ ಫುಟ್‌ಬಾಲ್ ಲೋಕದ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿತು.
ಇದನ್ನೂ ಓದಿ:ಭಾರತದಲ್ಲೂ ಕಾಲ್ಚಳಕ ಮೆರೆದಿದ್ದ ಪೆಲೆ
1962ರಲ್ಲಿ ಚಿಲಿಯಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿಯೂ ಬ್ರೆಜಿಲ್ ಗೆದ್ದು ಇತಿಹಾಸ ಬರೆಯಿತು. 1970ರಲ್ಲಿ ಮೆಕ್ಸಿಕೊದಲ್ಲಿಯೂ ಬ್ರೆಜಿಲ್ ಪಾರಮ್ಯ ಮೆರೆಯಿತು. ಇದಾಗಿ ಒಂದು ವರ್ಷದ ನಂತರ ಪೆಲೆ ತಮ್ಮ ಬೂಟುಗಳನ್ನು ಗೂಟಕ್ಕೆ ನೇತುಹಾಕಿದರು. ಆದರೆ ಅವರ ವ್ಯಕ್ತಿತ್ವದ ಪ್ರಭಾವಳಿ ಫುಟ್‌ಬಾಲ್‌ಗೆ ಮಾತ್ರ ಸೀಮಿತವಾಗಿರಲಿಲ್ಲ.
ಕಳೆದ 6 ದಶಕಗಳಲ್ಲಿ ಮರಡೊನಾ, ಪೆಪೆ, ಜಿನೆದಿನ್ ಜಿದಾನ್, ಬೆಕೆಮ್, ಪೆಪೆ, ಕಾಕಾ, ರೊನಾಲ್ಡಿನೊ, ಕ್ರಿಸ್ಟಿ ಯಾನೊ ರೊನಾಲ್ಡೊ, ಇತ್ತೀಚೆಗಷ್ಟೇ ಕತಾರ್‌ನಲ್ಲಿ ವಿಶ್ವಕಪ್ ಜಯಿಸಿದ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ, ಅದ್ಭುತ ಆಟದಿಂದ ಮನಗೆದ್ದ ಫ್ರಾನ್ಸ್‌ನ ಕಿಲಿಯನ್ ಎಂಬಾಪೆ, ಬ್ರೆಜಿಲ್‌ನ ನೇಮರ್, ಹೊಸ ಪೀಳಿಗೆಯ ವಿನ್ಸಿಯಸ್ ಜೂನಿಯರ್ ಅವರೆಲ್ಲರೂ ಪ್ರಖರವಾಗಿ ಬೆಳಗಿದ್ದಾರೆ. ಆದರೂ ಅವರೆಲ್ಲರಿಗಿಂತಲೂ ಪೆಲೆ ಪ್ರಭಾವಳಿ ಹೆಚ್ಚು.
ಫುಟ್‌ಬಾಲ್ ಆಟಗಾರರು ಇವತ್ತು ಬಹುಕೋಟಿ ಆದಾಯ ಗಳಿಸುವ ಕುಬೇರರಾಗಿದ್ದಾರೆ. ಪ್ರತಿಷ್ಠಿತ ಕ್ಲಬ್‌ಗಳು ಕೋಟ್ಯಂತರ ಹಣ ಹೂಡುತ್ತಿವೆ. ತಂತ್ರಜ್ಞಾನ ಮುಗಿಲುಮುಟ್ಟಿದೆ. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಈ ತಾರೆಗಳು ಸದಾ ಪ್ರಚಾರದಲ್ಲಿರುವಂತೆ ನೋಡಿಕೊಳ್ಳುವ ವೃತ್ತಿಪರ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇವ್ಯಾವೂ ಇಲ್ಲದ ಕಾಲದಲ್ಲಿ ಜನಿಸಿ ಬೆಳಗಿದವರು ಪೆಲೆ. 82ನೇ ವಯಸ್ಸಿನಲ್ಲಿ ಸಾವೋ ಪೌಲೊ ಆಸ್ಪತ್ರೆಯ ಐಸಿಯು ಬೆಡ್‌ನಲ್ಲಿದ್ದಾಗಲೂ ಕತಾರ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಿ ಆಟಗಾರರನ್ನು ಹುರಿದುಂಬಿಸಿದರು. ಅವರಲ್ಲಿ ಫುಟ್‌ಬಾಲ್ ಪ್ರೀತಿ ರಕ್ತಗತವಾಗಿತ್ತು. ಅದಕ್ಕಾಗಿಯೇ ಅವರು ಕ್ರೀಡಾ ಕ್ಷಿತಿಜದ ಧ್ರುವತಾರೆಯಾದರು.
ಪೆಲೆ ಹೆಸರು ಬಂದಿದ್ದು....
ಪೆಲೆಯ ಅಪ್ಪ, ಅಮ್ಮನಿಗೆ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಹೆಸರು ಬಹಳ ಅಚ್ಚುಮೆಚ್ಚು. ಅದಕ್ಕಾಗಿಯೇ ಮಗನಿಗೂ ಎಡಿಸನ್ ಎಂದೇ ನಾಮಕರಣ ಮಾಡಿದ್ದರು. ಆದರೆ ಶಾಲೆಯಲ್ಲಿ ದಾಖಲೆ ಬರೆಯುವವರು ಮಾಡಿದ ಲೋಪದಿಂದಾಗಿ ಇಂಗ್ಲಿಷ್ ಪದದಲ್ಲಿ ಐ ಅಕ್ಷರ ಬಿಟ್ಟುಹೋಯಿತು. ಎಡಿಸನ್ ಎಡ್ಸನ್ ಆಯಿತು. ಅವರನ್ನು ಎಲ್ಲರೂ ಪ್ರೀತಿಯಿಂದ ‘ಡಿಕೊ’ ಎಂದೇ ಕರೆಯುತ್ತಿದ್ದರು. ಅವರಿಗೆ ಪೆಲೆ ಹೆಸರು ಬಂದಿದ್ದು ಫುಟ್‌ಬಾಲ್ ಆಟದಲ್ಲಿ ಗಮನ ಸೆಳೆದ ಕಾರಣಕ್ಕಾಗಿಯೇ. ವಾಸ್ಕೋ ಡ ಗಾಮಾ ಕ್ಲಬ್ ಗೋಲ್‌ಕೀಪರ್ ಬಿಲೆ, ಎಡ್ಸನ್‌ಗೆ ಅಚ್ಚುಮೆಚ್ಚಿನ ಆಟಗಾರನಾಗಿದ್ದರು. ಎಡ್ಸನ್ ಅವರನ್ನು ಬಿಲೆ ಎಂದು ಕರೆಯುತ್ತ ಅದು ಕಾಲಕ್ರಮೇಣ ಪೆಲೆ ಅಥವಾ ಪಿಲೆ ಆಯಿತು.
ಫುಟ್‌ಬಾಲ್ ಜಗತ್ತು ಕಂಬನಿ
ಸಾವೊ ಪೌಲೊ (ಎಎಫ್‌ಪಿ): ಕಾಲ್ಚೆಂಡಾಟದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೆಲೆ (82) ಅವರ ನಿಧನಕ್ಕೆ ಫುಟ್‌ಬಾಲ್ ಜಗತ್ತು ಕಂಬನಿ ಮಿಡಿದಿದೆ. ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ.
ಇಲ್ಲಿನ ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆಲೆ ಗುರುವಾರ ರಾತ್ರಿ ನಿಧನರಾಗಿದ್ದರು. ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದರಿಂದ ಅವರನ್ನು ನ.29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬ್ರೆಜಿಲ್‌ನ ವಿವಿಧ ನಗರಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಮೆರಿಕದ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಐಒಸಿ ಮುಖ್ಯಸ್ಥ ಥಾಮಸ್ ಬಾಕ್, ಫುಟ್‌ಬಾಲ್ ಜಗತ್ತಿನ ಮಾಜಿ ಹಾಗೂ ಹಾಲಿ ಆಟಗಾರರು ಒಳಗೊಂಡಂತೆ ಹಲವು ಗಣ್ಯರು ಪೆಲೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಂಗಳವಾರ ಅಂತ್ಯಕ್ರಿಯೆ: ಪೆಲೆ ಅಂತ್ಯಕ್ರಿಯೆ ಮಂಗಳವಾರ ಸ್ಯಾಂಟೋಸ್ ನಗರದಲ್ಲಿ ನಡೆಯಲಿದೆ ಎಂದು ಅವರು ಈ ಹಿಂದೆ ಆಡಿದ್ದ ಸ್ಯಾಂಟೋಸ್ ಕ್ಲಬ್ ಹೇಳಿದೆ. ಈ ನಗರದಲ್ಲಿ ಏಳು ದಿನ ಶೋಕಾಚರಣೆ ಘೋಷಿಸಲಾಗಿದೆ.
ಮೃತದೇಹವನ್ನು ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಸ್ಯಾಂಟೋಸ್‌ನಲ್ಲಿರುವ ಕ್ರೀಡಾಂಗಣಕ್ಕೆ ತರಲಾಗುವುದು. ಅಂದು ಬೆಳಿಗ್ಗೆ 10 ರಿಂದ ಮಂಗಳವಾರ ಬೆಳಿಗ್ಗೆ 10ರ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.